Saturday, January 28, 2017

ಜುಹೂ ಬೀಚಿನ ಲಲನೆಯರೊಂದಿಗೆ ಒಂದು ಆಟ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 28.01.2017 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Saturday, January 14, 2017

Sunday, January 8, 2017

Punctuation: ಚಿಹ್ನೆಗಳ ಕಷ್ಟ, ಸುಖ ಮತ್ತು ಕುಶಲೋಪರಿ..



                                                A Woman, without her man, is nothing.
                                                A Woman: without her, man is nothing.

                                                                                 *
   ದೊಂದು ತಮಾಷೆ ನೋಡಿ. ಮೇಲಿನ ಎರಡೂ ವಾಕ್ಯಗಳು ವ್ಯಾಕರಣಬದ್ಧವಾಗಿಯೇ ರಚಿಸಲ್ಪಟ್ಟಿವೆ. ಮೇಲ್ನೋಟಕ್ಕೆ ಎರಡೂ ವಾಕ್ಯಗಳಲ್ಲಿ ಒಂದೇ ರೀತಿಯ ಅಕ್ಷರಗಳನ್ನು ಬಳಸಲಾಗಿದೆ. ಆದರೂ ಅಲ್ಲಿರುವ ಚಿಹ್ನೆಗಳಿಂದಾಗಿ ಎರಡೂ ವಾಕ್ಯಕ್ಕೂ ಬೇರೆಬೇರೆ ಅರ್ಥ ಬಂದುಬಿಟ್ಟಿದೆ. ವೈಯಕ್ತಿಕವಾಗಿ ಅನೇಕ ಸಲ ಅನಿಸುತ್ತದೆ: ಕವಿತೆಯ ಸೃಷ್ಟಿಕಾರ್ಯ ಬಹಳ ಅದ್ಭುತ ಖುಷಿ ನೀಡುವ ಕಾಯಕ. ಒಂದು ಪ್ಯಾರಾವೋ, ಒಂದು ಪುಟವೋ ಹೇಳಬಹುದಾದ ಸಂಗತಿಗಳನ್ನೆಲ್ಲ ಒಂದು ಪುಟ್ಟ ಕವಿತೆ ಧ್ವನಿಸಿ ಬಿಡಬಲ್ಲದು. ಆದರೆ ಅದನ್ನೆಲ್ಲ ಹಾಗೆ ಜಿನುಗಿಸಬೇಕಾದರೆ ಅದರೊಳಗೊಂದು ತೇವ ತುಂಬಿಸಬೇಕಾಗುತ್ತದೆ. ಪುಟ್ಟ ಮನೆ ಕಟ್ಟಬೇಕಾಗುತ್ತದೆ. ಪದಗಳಿಂದೇನೋ ಮನೆ ಕಟ್ಟಬಹುದು. ಆದರೆ ಆಧಾರ? ನಮ್ಮ ಕವಿತೆಯನ್ನು ನಾವು ಸರಳವಾಗಿ ಓದಬಲ್ಲೆವು. ಸ್ವಾದವನ್ನೂ ಅನುಭವಿಸಬಲ್ಲೆವು. ಆದರೆ ಅದನ್ನು ಇನ್ನೊಬ್ಬರು ಓದಲೆಂದು ಸ್ವತಃ ಕವಿಯೇ ಕೆಲವೊಂದು ನಿರ್ದೇಶನಗಳನ್ನು ಕೊಡಬೇಕಾಗುತ್ತದೆ. ಹಾಗಂತ ಕವಿ ಎಲ್ಲೆಡೆ ಇರಲು ಸಾಧ್ಯವೇ? ಅದೆಲ್ಲ ಕೆಲಸವನ್ನು ಕವಿ ಬಳಸಿದ ಚಿಹ್ನೆಗಳು ಮಾಡುತ್ತವೆ. ಓದುಗರು ಎಲ್ಲಿ ಅಚ್ಚರಿಯಾಗಬೇಕು, ಎಲ್ಲಿ ನಿಲ್ಲಬೇಕು, ಎಲ್ಲಿ ವಿಶ್ರಾಂತಿ ಬಯಸಬೇಕು, ಎಲ್ಲಿ ಕಂಪಿಸಬೇಕು- 
ಎಲ್ಲವನ್ನೂ ಹೇಳುವದು ಇದೇ ಚಿಹ್ನೆಗಳು. 

   ಹೊಸದಾಗಿ ಬರೆಯುವ ಬಹುತೇಕ ಕವಿತೆಗಳಲ್ಲಿ ಒಂದು ಮುಖ್ಯ ಕೊರತೆಯನ್ನು ಗಮನಿಸಬಹುದು. ಕೊರತೆಯೆಂದರೆ ಚಿಹ್ನೆಗಳ ಬಗ್ಗೆ ನಮಗಿರುವ ಅಸಡ್ಡೆ.  ಅದು ಅರಿವಿನ ಕೊರತೆಯೂ ಇರಬಹುದು. ನಾವು ಬಳಸುವ ಪದಗಳ ಜೊತೆಜೊತೆಗೇ ನಮ್ಮ ಚಿಹ್ನೆಗಳೂ ಅಷ್ಟೇ ಮುಖ್ಯ ಅನ್ನುವದನ್ನು ನಾವು ಮನಗಾಣಬೇಕಿದೆ. ಪೂರ್ಣವಿರಾಮ, ಅಲ್ಪವಿರಾಮ, ಉದ್ಧರಣ ಚಿಹ್ನೆ, ಉದ್ಗಾರವಾಚಕ, ಕೋಲನ್, ಸೆಮಿ ಕೋಲನ್, ಹೈಫನ್, ಟ್ವಿನ್ ಡಾಟ್ಸ್ ಬಗ್ಗೆ ನಮಗೆ ಸ್ವಲ್ಪವೂ ಗಮನವಿಲ್ಲ. ಇವೆಲ್ಲ ಚಿಹ್ನೆಗಳು ಒಂದೊಂದು ಮೂಡ್ ಅಥವಾ ಭಾವನೆಯನ್ನು ಹೊತ್ತು ಬಂದಿರುತ್ತವೆ ಅಂತ ನಮಗೆ ಗೊತ್ತಾಗಲೇಬೇಕಿದೆ. ವಿಪರ್ಯಾಸ ನೋಡಿ: ಒಂದೇ ಕವಿತೆಯಲ್ಲಿ ಹತ್ತತ್ತು ಉದ್ಗಾರವಾಚಕಗಳನ್ನು ಬಳಸುವಷ್ಟು ನಾವು ಉದಾರಿಯಾಗಿ ಬಿಟ್ಟಿದ್ದೇವೆ! ನಿಜ ಹೇಳಬೇಕೆಂದರೆಕವಿತೆಯಲ್ಲಿನ ಪದಗಳು ಸಂಖ್ಯೆಯಲ್ಲಿ ಕಂಜೂಸ್ ತನ ತೋರಿಸಬೇಕು; ಅರ್ಥದಲ್ಲಿ ಶ್ರೀಮಂತವಾಗಿರಬೇಕು. ನಮ್ಮ ಚಿಹ್ನೆಗಳು ಇನ್ನೂ ಕಂಜೂಸ್ ಆಗಿರಬೇಕು.

   ಇಷ್ಟಕ್ಕೂ ಇವತ್ತಿನ ಕತೆ, ಕವಿತೆ, ಪ್ರಬಂಧಗಳೆಂಬ ಸಾಹಿತ್ಯದಲ್ಲಿ ಚಿಹ್ನೆಗಳ (punctuation) ಪ್ರಾಮುಖ್ಯತೆ ಯಾಕೆ ಬಲವಾಗುತ್ತಿದೆ ಅನ್ನುವ ಸಂಗತಿಯೇ  ಕುತೂಹಲಕಾರಿಯಾಗಿದೆ. ಭಾರತವನ್ನೇ ತೆಗೆದುಕೊಳ್ಳಿ. ನಮ್ಮಲ್ಲಿ ಪುರಾತನ ಸಾಹಿತ್ಯ ಸೃಷ್ಟಿ ನಡೆದಿದ್ದು ಸಂಸ್ಕೃತದಲ್ಲಿ. ಇಂಥ ಸಂಸ್ಕೃತ ಭಾಷೆಯಲ್ಲಿ ಪಂಕ್ಚುಯೇಷನನ್ನು ನೀವು ಹುಡುಕಿದರೂ ಸಿಗುವದಿಲ್ಲ. ಕನ್ನಡದಲ್ಲಿ ಇವತ್ತು ನಾವು ಬಳಸುವ ಅಲ್ಪವಿರಾಮ, ಕೋಲನ್, ಸೆಮಿಕೋಲನ್, ಹೈಫನ್, ಉದ್ಗಾರವಾಚಕದಂಥ ಚಿಹ್ನೆಗಳು ಸಂಸ್ಕೃತದಲ್ಲಿ ಆವತ್ತೂ ಇರಲಿಲ್ಲ, ಇವತ್ತಿಗೂ ಇಲ್ಲ. ಹೆಚ್ಚೆಂದರೆ ಅಲ್ಲಿ ಪೂರ್ಣವಿರಾಮ ಸೂಚಿಸುವಂಥ ಒಂದು ಉದ್ದ ಗೆರೆ (।)ಯನ್ನು proseನಂಥ ಸಾಹಿತ್ಯದಲ್ಲಿಯೂ, ಎರಡೆರಡು ಗೆರೆ(।।)ಗಳನ್ನು ಶ್ಲೋಕ ಅಥವಾ ಪದ್ಯದಂಥ ಸಾಹಿತ್ಯದಲ್ಲಿಯೂ ಕಾಣಬಹುದು ಅಷ್ಟೇ. ಹಾಗಾದರೆ, ಆವತ್ತು ಈ ಚಿಹ್ನೆಗಳ ಅನುಪಸ್ಥಿತಿಯಲ್ಲಿಯೂ ಕೂಡ ಆಯಾ ಸಾಹಿತ್ಯದಲ್ಲಿ ಭಾವನೆಗಳನ್ನು ಹೇಗೆ ತರಲಾಯಿತು

   ಇಲ್ಲೊಂದು ಸ್ವಾರಸ್ಯಕರ ಅಂಶವನ್ನು ಗಮನಿಸಬೇಕು. ಆವತ್ತಿನ ಕಾಲಘಟ್ಟದಲ್ಲಿ ಅಕ್ಷರಕ್ರಾಂತಿ ಅತ್ಯಂತ ಕಡಿಮೆ ಸ್ತರದಲ್ಲಿತ್ತು. ಓದಿಕೊಂಡವರು ಕಡಿಮೆ ಜನ.    ಒಬ್ಬ ಜ್ಞಾನಿ ತಾಳೆಗರಿ ಹಿಡಿದುಕೊಂಡು ಶ್ಲೋಕ/ಕವಿತೆ/ಕತೆಯಂಥದ್ದನ್ನು ಓದುತ್ತಿದ್ದಾನೆ ಅಂತ ಅಂದುಕೊಂಡರೆ, ಅದನ್ನು ಕೇಳಿಸಿಕೊಳ್ಳುತ್ತಿದ್ದವರು ನೂರಾರು ಮಂದಿ. ದೇವಾಸ್ಥಾನದ ಅಂಗಳದಲ್ಲಿಯೋ, ದೊಡ್ಡದೊಂದು ವೃಕ್ಷದ ಅಡಿಯಲ್ಲಿಯೋ ಪಾರಾಯಣದಂಥ ಚಟುವಟಿಕೆಗಳು ನಡೆಯುತ್ತಿದ್ದವು. ಮುಖ್ಯವಾಗಿ, ಜ್ಞಾನಾರ್ಜನೆ ಅನ್ನುವದು ಶ್ರಾವ್ಯವಿಧಾನದ ಮೂಲಕ ನಡೆಯುತ್ತಿತ್ತೇ ಹೊರತು ಸ್ವತಂತ್ರ ಓದುವಿಕೆಯ ಮೂಲಕ ಅಲ್ಲ. ಪಾರಾಯಣ ಮಾಡುತ್ತಿದ್ದ ವಾಗ್ಗೇಯಕಾರನೇ ತಾನು ವಾಚಿಸುತ್ತಿದ್ದ ಕತೆಗಳಲ್ಲಿನ ಆಶ್ಚೈರ್ಯಸೂಚಕ, ಪ್ರಶ್ನಾರ್ಥಕಸೂಚಕಗಳನ್ನು ತನ್ನ ಧ್ವನಿಯ ಏರಿಳಿತದ ಮೂಲಕ ತೋರಿಸುತ್ತಿದ್ದ. ಇವತ್ತು ನಾವು ಬಳಸುತ್ತಿರುವ ಎಲ್ಲ ಚಿಹ್ನೆಗಳೂ ಆತನ ಮುಖದ ಭಾವನೆಗಳಲ್ಲಿ, ಕಣ್ಣಿನ ಚಲನೆಗಳಲ್ಲಿ, ಧ್ವನಿಯ ಏರಿಳಿತಗಳಲ್ಲಿ ಮತ್ತು ಆಂಗಿಕ ಹಾವಭಾವಗಳ ಮೂಲಕ ಸಮರ್ಥವಾಗಿ  ಬಿಂಬಿಸಲ್ಪಡುತ್ತಿತ್ತು. ಇಂಥದೊಂದು ಶ್ರಾವ್ಯ ವಿಧಾನ ಎಷ್ಟರಮಟ್ಟಿಗೆ ಚಿರಪರಿಚಿತವಾಯಿತೆಂದರೆ, ಅದು ಒಂದು ಅರ್ಥದಲ್ಲಿ ನಮ್ಮ ಜೀನ್ಸ್ ಗಳಲ್ಲಿಯೂ ಹರಿದುಬರುವಂತಾಯಿತು. ಇನ್ನೊಂದು ಅರ್ಥದಲ್ಲಿ, ಅದೇ ಒಂದು ಸಂಸ್ಕಾರವಾಯಿತು.

   ಇದಕ್ಕೆ ಉದಾಹರಣೆ ಕೊಡಬಹುದಾದರೆ, ಇವತ್ತು ಯಾರೋ ಅಕ್ಷರಬಲ್ಲ ಹುಡುಗನೊಬ್ಬ ಪುಸ್ತಕ ಎದುರಿಗಿಟ್ಟುಕೊಂಡು ಜೈಮಿನಿ ಭಾರತವನ್ನು ತಪ್ಪುತಪ್ಪಾಗಿ ಓದುತ್ತಿದ್ದರೆ, ಅಲ್ಲೇ ಕುಳಿತಿರುವ ಅಕ್ಷರಬಾರದ ಅಜ್ಜಿಯೊಬ್ಬಳು ಆ ಹುಡುಗನ ತಪ್ಪುಗಳನ್ನು ತಿದ್ದಬಲ್ಲಳು. ಇಂಥ ಜಾಗದಲ್ಲಿ pause ಕೊಡಬೇಕು, ಇಂಥ ಜಾಗದಲ್ಲಿ ನಿಲ್ಲಬೇಕು ಅಂತ ಎಚ್ಚರಿಸಬಲ್ಲಳು! ಯಾಕೆಂದರೆ, ಆಕೆ 'ಜೈಮಿನಿ ಭಾರತ'ವನ್ನು ಕೇಳಿ ಅರಿತವಳೇ ಹೊರತು ಓದಿ ಅರಿತವಳಲ್ಲ..

  
   ಆದರೆ ಇವತ್ತು ಕಾಲ ಬದಲಾಗುತ್ತಿದೆ. ಅಕ್ಷರಕ್ರಾಂತಿ ಹರಡುತ್ತಿದೆ. ಎಲ್ಲರೂ ಸ್ವತಂತ್ರವಾಗಿ ಜ್ಞಾನಾರ್ಜನೆ ಮಾಡಿಕೊಳ್ಳಬೇಕೆಂದು ಹಪಾಹಪಿ ಮೂಡತೊಡಗಿದೆ. ಇದು ಒಳ್ಳೆಯ ಬೆಳವಣಿಗೆ ಕೂಡ. ಆದರೆ ಜ್ಞಾನಾರ್ಜನೆ, ಮನರಂಜನೆ, ಬೋಧನೆ ಮತ್ತು ಆಪ್ತತೆ ನೀಡಬೇಕಾದ ಕೃತಿಗಳು ತಮ್ಮ ಮೂಲಸತ್ವವನ್ನು ಸಾದರಪಡಿಸುವಲ್ಲಿ ಈ ಚಿಹ್ನೆಗಳ ಮಹತ್ವ ಎಂದಿಗಿಂತಲೂ ಇವತ್ತು ಹೆಚ್ಚಿನಮಟ್ಟಿಗೆ ಎದ್ದು ಕಾಣುತ್ತಲಿದೆ. ಈ ಬೆಳವಣಿಗೆ ಇವತ್ತು ಹುಟ್ಟಿದ್ದಲ್ಲ. ನಾಗರಿಕತೆ ಹುಟ್ಟುವ ಸಮಯದಲ್ಲೇ ಇಂಥದೊಂದು ಜಿಜ್ಞಾಸೆ ಆವತ್ತಿನ ಜ್ಞಾನಪಿಪಾಸುಗಳಲ್ಲಿ ಕಂಡು ಬಂದಂತಿದೆ. 

   ಕ್ರಿ.ಪೂ. ಮೂರನೇ ಶತಮಾನದಲ್ಲಿ ಈಜಿಪ್ಟಿನ ಅಲೆಕ್ಜಾಂಡ್ರಿಯಾ ಶಹರದ ಅರಿಸ್ಟಾಫನೀಸ್ (Aristophanes) ಎಂಬ ಗ್ರಂಥಪಾಲಕ (ಮತ್ತು ನಾಟಕಕಾರ)ನೊಬ್ಬ ಮೊದಲಬಾರಿಗೆ ಪಂಕ್ಚುಯೇಶನ್ ಬಗ್ಗೆ ಎತ್ತಿ ಹೇಳುತ್ತಾನೆ. ಆವತ್ತೂ ಕೂಡ ಯಾವುದೇ ಚಿಹ್ನೆಗಳನ್ನು ಬಳಸದೇ ಉದ್ದುದ್ದಕ್ಕೆ ಬರೆಯಬಹುದಾದ ವಾಕ್ಯರಚನೆಯ ಕ್ರಮವಿತ್ತು.  ಹೀಗಿರುವಾಗ, ಓದುವಿಕೆಯ ಓಘಕ್ಕೆ ಒಂದು ಶಿಸ್ತು ತಂದುಕೊಡುವದಕ್ಕಾಗಿ ಈತ ಮೂರು ರೀತಿಯ 'ಡಾಟ್' (ಇವತ್ತಿನ ಪೂರ್ಣವಿರಾಮದ ಥರ)ಗಳನ್ನು ಪರಿಚಯಿಸುತ್ತಾನೆ. ಅವು ಅನುಕ್ರಮವಾಗಿ ಕೆಳಗಿನ ಚಿತ್ರದಲ್ಲಿವೆ:





೧. ವಾಕ್ಯದ ಕೊನೆಯ ಕೆಳತುದಿಯಲ್ಲಿ(.) ಚುಕ್ಕೆಯನ್ನಿಟ್ಟರೆ- ಅದು ಅಲ್ಪವಿರಾಮ 
೨. ವಾಕ್ಯದ ಕೊನೆಯಲ್ಲಿ ಮಧ್ಯಭಾಗದಲ್ಲಿ ಚುಕ್ಕೆಯನ್ನಿಟ್ಟರೆ- ಅದು ಅಪೂರ್ಣ ವಿರಾಮ (ಇವತ್ತಿನ ಕೊಲನ್)                 
೩. ವಾಕ್ಯದ ಕೊನೆಯಲ್ಲಿ ಮೇಲ್ಭಾಗದಲ್ಲಿ ಚುಕ್ಕೆಯನ್ನಿಟ್ಟರೆ- ಅದು ಕಾಲಘಟ್ಟವನ್ನು ಸೂಚಿಸುವ ಚಿಹ್ನೆ (ಅಂದರೆ, ಇವತ್ತು ನಾವು ದಿನಾಂಕವನ್ನು ಸೂಚಿಸುವಾಗ 'ದಿನಾಂಕ' ಅಂತ ಬರೆದು ಅದರ ಮುಂದೆ ಎರಡು ಚುಕ್ಕೆ ಇಡುತ್ತೇವಲ್ಲ? ಹಾಗೆ.)

   ಅರಿಸ್ಟಾಫನೀಸನ ಈ ಸಲಹೆ ಬಹಳಷ್ಟು ಜನರಿಗೆ ಹಿಡಿಸುವದಿಲ್ಲ. ಹೀಗಾಗಿ ಕಾಲಕ್ರಮೇಣ ಆತನ ಸಲಹೆ ಹಿಂಬದಿಗೆ ಸರಿಯುತ್ತದೆ. ಇದಕ್ಕೂ ಒಂದು ಶತಮಾನದ ಮುಂಚೆಯೇ ಈಜಿಪ್ಟಿನ ಜನ ಇನ್ನೊಂದು ರೀತಿಯ ಪ್ರಯೋಗಕ್ಕೆ ಮುಂದಾಗಿರುತ್ತಾರೆ. ಅದೇನೆಂದರೆ, ವಾಕ್ಯವೊಂದರ ಪ್ರತಿಯೊಂದು ಪದದ ನಂತರವೂ ಒಂದೊಂದು ಚುಕ್ಕೆ ಇಡುತ್ತ ಹೋಗುವದು. (ಉದಾ: ನಾನು. ಊಟಕ್ಕೆ. ಹೋಗುತ್ತೇನೆ.) ಆದರೆ ಸರಾಗ ಓದುವಿಕೆಗೆ ಇದು ಅಡ್ಡಿಯನ್ನುಂಟು ಮಾಡುತ್ತದೆ ಅನ್ನುವ ಕಾರಣಕ್ಕಾಗಿ ಈ ಪ್ರಯೋಗವೂ ಕೆಲಕಾಲದ ನಂತರ ವಿಫಲವಾಗುತ್ತದೆ. ಹೀಗೆ ಚಿಹ್ನೆಗಳ ಕುರಿತಂತೆ ಪ್ರಯೋಗ ಕೇವಲ ಈಜಿಪ್ಟ್ ಅಲ್ಲದೇ ಜಗತ್ತಿನಲ್ಲೆಡೆ ನಡೆಯುತ್ತಲೇ ಬಂದಿದೆ. 

   ಕ್ರಿಸ್ತಶಕೆ ಆರಂಭವಾದಾಗ ರೋಮ್ ನಲ್ಲೊಂದು ಪ್ರಯೋಗ ನಡೆಯುತ್ತದೆ. ಕ್ರಿ.ಶ. ನಾಲ್ಕು ಮತ್ತು ಐದನೇ ಶತಮಾನದ ಕಾಲಘಟ್ಟವದು. ರೋಮ್ ಸಾಮ್ರಾಜ್ಯದಲ್ಲಿ ಧರ್ಮಯುದ್ಧ ಶುರುವಾಗುತ್ತದೆ. ಆಸ್ತಿಕ ರಾಜರು ಮತ್ತು ನಾಸ್ತಿಕ ಚಕ್ರವರ್ತಿಗಳ ಈ ಧರ್ಮಯುದ್ಧದಲ್ಲಿ ನಾಸ್ತಿಕ ಚಕ್ರವರ್ತಿಗಳು ಸತ್ತುಹೋಗುತ್ತಾರೆ. ಪರಿಣಾಮವಾಗಿ, ಧರ್ಮಕ್ಕೆ ನಡೆದುಕೊಳ್ಳುವ ರಾಜರುಗಳ ಅಧಿಪತ್ಯ ಶುರುವಾಗುತ್ತದೆ. ಹೀಗಾಗಿ, ಕ್ರಿಸ್ತನ ಅನುಯಾಯಿಗಳಾದ ಕ್ರೈಸ್ತ ಧರ್ಮ ಗುರುಗಳು ಪ್ರವರ್ಧಮಾನಕ್ಕೆ ಬರುತ್ತಾರೆ. ಅವರು ರೋಮ್ ತುಂಬೆಲ್ಲ ಕ್ರಿಸ್ತನ ಬೋಧನೆಗಳನ್ನು ಪ್ರಸರಿಸುವದಕ್ಕಾಗಿ ಕೃತಿ ರಚನೆಗಿಳಿಯುತ್ತಾರೆ. ಇಲ್ಲಿ ಇನ್ನೊಂದು ರೀತಿಯ ಚಿಹ್ನೆ ಚಳುವಳಿ ನಡೆಯುತ್ತದೆ. ಶಿಲುಬೆಯ ಚಿಹ್ನೆ ಜೊತೆಗೆ ಕ್ರೈಸ್ತ ಮತವನ್ನು ಪರೋಕ್ಷವಾಗಿ ಬೆಂಬಲಿಸುವಂಥ (Γ, ¢, 7, ¶) ಚಿಹ್ನೆಗಳನ್ನು ತಮ್ಮ ಕೃತಿಗಳಲ್ಲಿ ಬಳಸತೊಡಗುತ್ತಾರೆ. ವಿಶೇಷವೆಂದರೆ, ಈ ಚಿಹ್ನೆಗಳು ಆಯಾ ವಾಕ್ಯಕ್ಕೆ ಯಾವುದೇ ವಿಶೇಷಾರ್ಥ ಕಲ್ಪಿಸುವಲ್ಲಿ ಸಫಲವಾಗದಿದ್ದರೂ ಕೂಡ ಆಯಾ ಪುಟಕ್ಕೆ ಅಥವಾ ಆಯಾ ಕೃತಿಯನ್ನು ಶೃಂಗರಿಸುವ ಕೆಲಸವನ್ನು ಸಮರ್ಥವಾಗಿ ಮಾಡುತ್ತವೆ. ಇಂಥದ್ದೇ ಬೆಳವಣಿಗೆಯನ್ನು ನಮ್ಮ ಕನ್ನಡದ ಪುರಾತನ ಶಾಸನಗಳಲ್ಲಿಯೂ ಕಾಣಬಹುದಾಗಿದೆ. ಶಿಲಾಶಾಸನವನ್ನು ಕೆತ್ತಿಸಿದ ಆಯಾ ವ್ಯಕ್ತಿಯ ಧರ್ಮಕ್ಕನುಗುಣವಾಗಿ ಶಂಖ, ಚಕ್ರ, ಚಂದ್ರ, ಸ್ವಸ್ತಿಕ, ಹೂವು ಮುಂತಾದ ಡೆಕೋರೇಟಿವ್ ಚಿಹ್ನೆಗಳನ್ನು ನಮ್ಮಲ್ಲಿಯೂ ಕಾಣಬಹುದಾಗಿದೆ. ಇದೊಂಥರಾ ನಾವು ಚಿಕ್ಕವರಾಗಿದ್ದಾಗ ಹೆಡ್ಡಿಂಗ್ ಬರೆದು ಅಕ್ಕಪಕ್ಕ ಎರೆಡೆರೆಡು ಚುಕ್ಕೆಗಳನ್ನಿಟ್ಟು ಅಂಡರ್ ಲೈನ್ ಎಳೆದಂತೆ!

   ಹೀಗೆ ಸಾಹಿತ್ಯ ಸಂಪಾದನೆಯಲ್ಲಿ ನಾನಾ ಹಂತಗಳನ್ನು ದಾಟಿ ಬಂದಿರುವ ಈ ಚಿಹ್ನೆಗಳು ಇವತ್ತಿನ ರೂಪ ಪಡೆದುಕೊಂಡಿರುವದು ಆಂಗ್ಲ ಸಾಹಿತ್ಯದ ಪ್ರಭಾವಳಿಯಲ್ಲಿ. ಕಳೆದೆರಡು ಶತಮಾನದಿಂದೀಚೆಗೆ 
ಆಂಗ್ಲ ಸಾಹಿತ್ಯ ಪಂಕ್ಚುಯೇಶನ್ ಬಗ್ಗೆ ಹುಷಾರು ತಳೆದಿದೆ. ಇದರ ಪ್ರಭಾವ ಜಗತ್ತಿನ ಇತರೇ ಭಾಷೆಗಳಿಗೂ ಹಬ್ಬುತ್ತಲಿದೆ. 
ಹೀಗಿದ್ದರೂ ಕೂಡ ಪ್ರಪಂಚದ ಹಲವಾರು ಭಾಷೆಗಳು ತಮ್ಮೊಳಗಿನ ದೇಸೀತನವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. 
ಉದಾಹರಣೆಗೆ, ನಮ್ಮೆಲ್ಲರ ಪ್ರಶ್ನಾರ್ಥಕ ಚಿಹ್ನೆ ಗ್ರೀಕ್ ಭಾಷೆಯಲ್ಲಿ ಸೆಮಿಕೊಲನ್ ಆಗಿ ಬಳಸಲಾಗುತ್ತದೆ. ಸ್ಪಾನಿಶ್ ಭಾಷೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಬಳಸುವಂಥ ಸಂದರ್ಭ ಬಂದಾಗ ವಾಕ್ಯದ ಆರಂಭದಲ್ಲೇ ತಿರುವುಮುರುವಾದ ಪ್ರಶ್ನಾರ್ಥದ ಚಿಹ್ನೆಯನ್ನು ಬಳಸಲಾಗುತ್ತದೆ ಹಾಗೂ ಕೊನೆಯಲ್ಲಿ ಸಾಮಾನ್ಯ ಪ್ರಶ್ನಾರ್ಥಕ ಚಿಹ್ನೆ ಬಳಸುವದರೊಂದಿಗೆ ವಾಕ್ಯವನ್ನು ಮುಕ್ತಾಯಗೊಳಿಸಲಾಗುತ್ತದೆ. ನಮ್ಮ ತಮಿಳು ಲಿಪಿಯ ಆಕಾರವನ್ನು ಹೋಲುವ ಜಾರ್ಜಿಯನ್ ಭಾಷೆಯಲ್ಲಿ ತ್ರಿಕೋಣಾಕಾರದ ಮೂರು ಚುಕ್ಕೆಗಳನ್ನಿಟ್ಟರೆ,  ಅಲ್ಲಿಂದ ಹೊಸ ಪ್ಯಾರಾ ಶುರುವಾಗಿದೆ ಅಂತರ್ಥ. ಇನ್ನು 'ಪಿಕ್ಟೋಗ್ರಾಮ್' ಅಂತ ಕರೆಯಲ್ಪಡುವ, ಅಂದರೆ ಚಿತ್ರದ ಮೂಲಕ ಅಕ್ಷರಗಳನ್ನು ತೋರಿಸಬಲ್ಲ ಪುರಾತನ ಚೀನಾ ಮತ್ತು ಸುಮೇರಿಯನ್ ಲಿಪಿಗಳು ಪಂಕ್ಚುಯೇಶನ್ ಮಾಡುವದಕ್ಕೆ ಆಸ್ಪದ ಒದಗಿಸಿಲ್ಲ. ಹಾಗೆಯೇ ಜಪಾನ್ ಮತ್ತು ಕೋರಿಯನ್ ಭಾಷೆಗಳ ವ್ಯಾಕರಣದ ರಚನೆ ಮತ್ತು ಲಿಪಿಯ ವಿನ್ಯಾಸದ ಕಾರಣಕ್ಕಾಗಿ ಅಲ್ಲಿ ಯಾವುದೇ ಚಿಹ್ನೆ ಬಳಕೆ ಮೊದಲಿನಿಂದ ಇಲ್ಲ. 

   ಹಾಗಾದರೆ ಕನ್ನಡದಲ್ಲಿ ನಾವೇಕೆ ಪಂಕ್ಚುಯೇಶನ್ ಬಳಸುತ್ತಿದ್ದೇವೆ? ಮೊದಲನೆಯದಾಗಿ, ಈಗ ಜ್ಞಾನಾರ್ಜನೆ ಎಂಬುದು ಕೇವಲ ಶ್ರಾವ್ಯವಿಧಾನವಾಗಿ ಉಳಿದಿಲ್ಲ. ಎಲ್ಲರೂ ಸ್ವಯಂ ಓದಿನ ಮೂಲಕ ಜ್ಞಾನಾರ್ಜನೆ ಬಯಸುತ್ತಿದ್ದಾರೆ. ಹೀಗಾಗಿ ಕೃತಿಯೊಂದು ತನ್ನೊಳಗಿನ ಸತ್ವವನ್ನು ಯಾವುದೇ ಮೂರನೇ ವ್ಯಕ್ತಿಯ ಸಹಾಯವಿಲ್ಲದೇ ಜ್ಞಾನಾರ್ಥಿಗೆ ಸಮರ್ಥವಾಗಿ ಬಿಂಬಿಸಬೇಕಿದೆ. ಎರಡನೇಯದಾಗಿ, ಈ ಮೊದಲೇ ಹೇಳಿದಂತೆ, ನಮಗರಿವಿಲ್ಲದೇ ನಾವು ಆಂಗ್ಲ ಸಾಹಿತ್ಯದ ಶೈಲಿಯನ್ನು ಕನ್ನಡದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಅಕ್ಷರ ಕನ್ನಡದ್ದಿರಬಹುದು, ಆದರೆ ವಾಕ್ಯರಚನಾ ಕ್ರಮದ ಮೇಲೆ ಆಂಗ್ಲದ ಪ್ರಭಾವ (writing style) ಸಾಕಷ್ಟಾಗುತ್ತಿದೆ. ಹೀಗಾಗಿ, ವಿಶೇಷ ಅರ್ಥ ಹೊರಡಿಸುವದಕ್ಕಾಗಿ ನಮ್ಮ ವಾಕ್ಯರಚನೆಯಲ್ಲಿ ಚಿಹ್ನೆಗಳ ಸರಿಯಾದ ಅಳವಡಿಕೆ ಕಡ್ದಾಯವಾಗುತ್ತಲಿದೆ. 

   ಗಮನಾರ್ಹ ಸಂಗತಿಯೆಂದರೆ, ನಮ್ಮ ಹಳೆಯ ಕವಿಗಳಾದ ರನ್ನ, ಪಂಪ, ಕುಮಾರವ್ಯಾಸರಿಗೆ ಚಿಹ್ನೆಗಳ ಅಗತ್ಯತೆ ಕಂಡುಬಂದಿಲ್ಲ. ಆದರೂ ಇವರೆಲ್ಲರೂ ತಮ್ಮ  ಓದುಗರ ಓದಿನ ಓಘಕ್ಕೆ ಮತ್ತು ತಮ್ಮ ಕೃತಿಗಳ ಸ್ವಾರಸ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಪದಗಳನ್ನು ಅಲ್ಲಲ್ಲಿ ತುಂಡು ಮಾಡುವದರ ಮೂಲಕವೋ ಅಥವಾ ಕರ್ತೃ/ಕರ್ಮ/ಕ್ರಿಯಾಪದಗಳ ಸ್ಥಾನವನ್ನು ಪಲ್ಲಟ ಮಾಡುವದರ ಮೂಲಕವೋ- ತಮ್ಮ ಕೃತಿಗಳಲ್ಲಿ ಅಗೋಚರ ಪಂಕ್ಚುಯೇಶನ್ ಸೃಷ್ಟಿಸಿದ್ದಾರೆ! ಇದಕ್ಕೆ ಉದಾಹರಣೆಯಾಗಿ ಬಸವಣ್ಣನ ವಚನವನ್ನು ನೋಡಬಹುದು:

ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲ ಸಂಗಮದೇವ ನಿಮ್ಮನರಿವವಂಗೆ

ಒಟ್ಟಿನಲ್ಲಿ, ನಮಗೆ ಬೇಕೋ ಬೇಡವೋ- ಸದ್ಯಕ್ಕಂತೂ ಸಾಹಿತ್ಯದ ಸೃಷ್ಟಿಕ್ರಿಯೆಯಲ್ಲಿ ಚಿಹ್ನೆ ಎಂಬುದು ಮಾತ್ರ ತನ್ನದೇ ಆದ ಪಾತ್ರ ವಹಿಸುತ್ತಲಿದೆ. ಈ ಹಿಂದೆ ಶಂಖ, ಚಕ್ರ, ಹೂಗಳನ್ನು ಕೆತ್ತಿ ಶಾಸನಗಳನ್ನು ಶೃಂಗರಿಸಿದೆವು. ಇವತ್ತು ಎಮೋಜಿ(emoticons)ಗಳನ್ನು ಬಳಸುತ್ತ ನಮ್ಮ ಕೃತಿಗಳನ್ನು ಡೆಕೋರೇಟ್ ಮಾಡುತ್ತಿದ್ದೇವೆ. ಇದಕ್ಕೆ ಬೆಂಬಲವೆಂಬಂತೆ ಆಕ್ಸಫರ್ಡ ನಿಘಂಟೇ ಈ ಎಮೋಜಿಗಳಿಗೆ ಹೊಸ ಹೊಸ ಅರ್ಥಗಳನ್ನೂ ನೀಡಿ ತನ್ನ ಪುಟಗಳಲ್ಲಿ ಆಫೀಶಿಯಲ್ ಸ್ಥಾನ ಕೂಡ ನೀಡಿಯಾಗಿದೆ.

ಕೊನೆಯದಾಗಿ, ಇಲ್ಲಿ ಯಾವುದೂ ಶಾಶ್ವತವಲ್ಲ. ಬದಲಾವಣೆ ಮಾತ್ರ ನಿರಂತರ. ಇಲ್ಲಿ ಕೃತಿಕಾರ ತಾನು ಹೇಳಬೇಕಾದ ಸಂಗತಿಗಳನ್ನು ಎದುರಿಗಿದ್ದವರಿಗೆ ಎಷ್ಟು ಸಮರ್ಥವಾಗಿ ಹೇಳಿದ ಅನ್ನುವದಷ್ಟೇ ಮುಖ್ಯ. ಹೀಗಿರುವಾಗ, "ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.."  ಎನ್ನುವಂತೆ, ಚಿಹ್ನೆ ಬಿಟ್ಟು ಕೇವಲ ಪದಗಳ ಮೇಲೆ ವಾಕ್ಯ ನಿಲ್ಲದು ಅನ್ನುವಂತಾಗಿದೆ.. 
-

(ಸದರಿ ಲೇಖನವನ್ನು 'ಪದಾರ್ಥ ಚಿಂತಾಮಣಿ' ಎಂಬ ಫೇಸ್ ಬುಕ್ ಗುಂಪಿನ 2016 ನೇ ಸಾಲಿನ ಕಮ್ಮಟದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆಗಾಗಿ ಬರೆದಿದ್ದು. ಅದರಲ್ಲಿ ಕೂಡ ಪ್ರಕಟವಾಗಿದೆ)  
(ಸ್ಥಳ/ಕಾಲದ ಮಾಹಿತಿ: ಅಂತರಜಾಲ)
    

Saturday, January 7, 2017

ಹೊಸ ವರುಷಕ್ಕೊಂದು ರಂಗಾರಂಗ ಕಾರ್ಯಕ್ರಮ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 31.12.2016 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)