Wednesday, September 27, 2017

ಗಾಂಧೀಯ ಸರಳತೆಯೂ ಹಾಯ್ಕುವಿನ ಭವ್ಯತೆಯೂ!

ಅಂತ್ಯದಲ್ಲಿ ಬರಹಕ್ಕೊಂದು ಮೆಸೇಜ್ ಇರಲೇಬೇಕಾ?  ನನಗಂತೂ ಯಾವತ್ತೂ ಹಾಗೆ ಅನಿಸಿಲ್ಲ. ಯಾಕೆಂದರೆ ಕನವರಿಸಿ ಹುಡುಕಿಕೊಂಡು ಹೋದ ಕಾಡಿನ ಮಧ್ಯೆ ಕಾಲುದಾರಿಗಾಗಿ ಹುಡುಕಾಟ ನಡೆಸುತ್ತಿರುವಾಗ ದಿಢೀರಂತ ಹೈವೇ ಕಂಡುಬಿಟ್ಟರೆ ಅದಕ್ಕಿಂತ ನಿರಾಸೆ ಮತ್ತೊಂದಿಲ್ಲ. ಅರೇ, ಇಷ್ಟೊತ್ತೂ ತಿರುಗಾಡಿದ್ದು, ಗಾಬರಿಯಾಗಿದ್ದು, ಪುಳಕಗೊಂಡಿದ್ದು, ಕಾಡಿನ ಘಮ, ಆ ನೀರವತೆ ಎಲ್ಲ ಸುಳ್ಳು ಅಂತನಿಸಿಬಿಡುತ್ತದೆ. ಅಲ್ಲಿಗೆ ಅದೊಂದು ವ್ಯರ್ಥ ಪಯಣ.  

   ಬರಹಗಳ ಅಂತ್ಯದಲ್ಲಿ ಪ್ರಯತ್ನಪೂರ್ವಕವಾಗಿ ಹೇರಲ್ಪಡುವ ಸಂದೇಶಗಳೂ ಹೀಗೆಯೇ. 'ರಾಮನು 
ಬಾಳೆಹಣ್ಣು ತಿಂದು ನಿದ್ದೆಹೋದನು..' ಅಂತ ಸರಳವಾಗಿ ಮುಕ್ತಾಯವಾಗುವ ಕತೆಯಲ್ಲಿ ಅಷ್ಟೇ 
ಸಹಜವಾಗಿ ಓದುಗನಿಗೆ ದೊರಕುವ unwritten ಸಂದೇಶ ಎಲ್ಲ ಪದಕಸರತ್ತಿಗಿಂತ ಮೀರಿದ್ದು. 
'ಆವತ್ತೊಂದು ದಿನ ಕುಡಿದು ಗಟಾರದಲ್ಲಿ ಬಿದ್ದಿದ್ದೆ' ಅಂತನ್ನುವ ಅನುಭವಾಮೃತ ದಯಪಾಲಿಸುವ ಲೇಖಕ, ಉದ್ದೇಶಪೂರ್ವಕವಾಗಿ ಸಂದೇಶ ಕೊಡದೇ ತನಗರಿವಿಲ್ಲದಂತೆ ಓದುಗರ ಗ್ಯಾಲರಿಗೆಂದು 
ಒಂದು ಸರಳ ಮೆಸೇಜ್ ಬಿಟ್ಟು ಹೋಗಿರುತ್ತಾನೆ. ಇವರ್ಯಾರಿಗೂ ಸಂದೇಶವಾಹಕರಾಗುವ ಹಂಗು ಇದ್ದಂತಿಲ್ಲ. ವ್ಯಾಸನಿಗೂ ಈ ವ್ಯಸನವಿದ್ದಂತಿಲ್ಲ. ಹೀಗಾಗಿ ಮೂರೂ ಮುಕ್ಕಾಲು ಪುಟಕ್ಕೊಂದು ಹಿಡನ್ ಸಂದೇಶ ರವಾನಿಸುತ್ತಲೇ ಹೋಗುವ ಮಹಾಭಾರತ, ಏನಾದರೂ ಮೆಸೇಜು ಕೊಡಲೇಬೇಕು ಅಂತ ಅವುಡುಗಚ್ಚಿ ಉಪಸಂಹಾರ ಮಾಡುವವರಿಗೆ ಒಂದು ಅತಿದೊಡ್ಡ ಬೈಬಲ್ ಅಂತ ಮಾತ್ರ ಹೇಳಬಹುದೇನೋ.         

   ಹೀಗಿರುವಾಗ, ಮೊನ್ನೆ ಸಂಜೆ ಮನೆ ಟೆರೇಸಿನ ಮೇಲೆ ಹೀಗೆಯೇ ಖಾಲಿಪೀಲಿ ಮಾತುಕತೆ ನಡೆದಿತ್ತು. 
ಷೇರುಮಾರುಕಟ್ಟೆಯ ಚಂಚಲತೆ, ಯಾವುದೋ ಹಾಡಿನ ಗಿಟಾರ್ ನೋಟೇಷನ್, ಇಸ್ಪೀಟು ಎಲೆಯಲ್ಲಿನ 
ಟ್ರಿಕ್ಕುಗಳು, ಕಾಣದ ಗುಬ್ಬಿಹಿಂಡು- ಹೀಗೆ ಎಲ್ಲಿಂದ ಎಲ್ಲಿಗೋ ಓತಪ್ರೋತವಾಗಿ ಜಿಗಿಯುತ್ತಿದ್ದ ನಮ್ಮ 
ಗುಂಪಿನ ಮಾತುಕತೆಗೆ ಒಂದು ನಿಶ್ಚಿತ ಉದ್ದೇಶ ಇದ್ದಂತಿರಲಿಲ್ಲ. ಅಷ್ಟರಲ್ಲಿ ಈಗಷ್ಟೇ ಡಿಗ್ರಿ ಮುಗಿಸಿ ಕೆಲಸ 
ಹುಡುಕುತ್ತಿರುವ ಹುಡುಗನೊಬ್ಬ ಮಾತಿನ ಮಧ್ಯೆ ಸಟ್ಟಂತ ಹೇಳಿಬಿಟ್ಟ: 
'ಏನೇ ಹೇಳ್ರಿ, ಬದುಕಿನಲ್ಲಿ ದುಡ್ಡೇ ಎಲ್ಲ ಅಲ್ಲ.'

   ನಾವೆಲ್ಲ ಮುಸಿಮುಸಿ ನಕ್ಕಿದ್ದೆವು. ಹಾಗಾದರೆ ಯಾವುದು ಮುಖ್ಯ? ಪ್ರೀತಿಯಾ? ವಿಶ್ವಾಸವಾ? ಗೆಳೆತನವಾ? ಆರೋಗ್ಯವಾ? ವಿದ್ಯೆ? ಧಾಡಸೀತನ? ಚಾಲಾಕಿತನ? ಸೌಂದರ್ಯ? ಒಳ್ಳೆಯತನ? ಅರಿವು? ಯಾರಿಗೆ ಯಾವುದು ಮುಖ್ಯವೋ ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವವರ ಪೈಕಿ ಯಾರಾದರೂ 'ದುಡ್ಡೇ ಮುಖ್ಯ ಅಲ್ಲ' ಅಂದುಬಿಟ್ಟರೆ ನನಗ್ಯಾಕೋ ಅದು ನಗು ತರಿಸುತ್ತದೆ. ಯಾಕೆಂದರೆ ನನ್ನ ನಂಬಿಕೆಯಂತೆ, ಹಾಗೆ ಹೇಳಲು ಅರ್ಹತೆ ಇರುವದು ಕೇವಲ ಮೂರು ಜನರಿಗೆ ಮಾತ್ರ: ಒಂದೋ, ಆತ ಸಂತನಾಗಿರಬೇಕು. ಇಲ್ಲವಾದಲ್ಲಿ ಆತ ಈಗಾಗಲೇ ಸಿಕ್ಕಾಪಟ್ಟೆ ದುಡ್ಡು ಗಳಿಸಿರಬೇಕು. ಇವೆರೆಡೂ ಅಲ್ಲವಾದಲ್ಲಿ ಆತ ಮಾನಸಿಕವಾಗಿ ಅಸ್ವಸ್ಥನಾಗಿರಬೇಕು!
                                  
   ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ಹೋಗಿದ್ದೆ. ನನ್ನ ಟೆಕ್ಕಿ ಗೆಳೆಯರು ಅವರವರ ಇಷ್ಟಾನುಸಾರ ಪುಸ್ತಕ, ಸೀಡಿ, ಡಿವಿಡಿ ಖರೀದಿಯಲ್ಲಿ ತೊಡಗಿದ್ದರು. ಕೆಲವೊಂದು ಇಂಗ್ಲಿಷ್ ಪುಸ್ತಕಗಳ ಬೆಲೆಯಂತೂ ಗಾಬರಿಯಾಗುವ ರೀತಿಯಲ್ಲಿದ್ದವು. ಅಷ್ಟರಲ್ಲಿ ಗೆಳೆಯನೊಬ್ಬ ಒಂದು ಪುಸ್ತಕದ ಗಾತ್ರ ಮತ್ತು ಬೆಲೆಯನ್ನು ವಿಚಿತ್ರ ರೀತಿಯಲ್ಲಿ ನೋಡತೊಡಗಿದ್ದ. ಸದರಿ ಪುಸ್ತಕದ ಪುಟಗಳನ್ನು ಅವಸರದಿಂದ ತಿರುಗಿಸುತ್ತ 'ಇಷ್ಟೇನಾ? ಬರೀ ಇಷ್ಟೇನಾ?' ಅಂತ ಪದೇಪದೇ ಗೊಂದಲಕ್ಕೆ ಈಡಾಗುತ್ತಿದ್ದ. ಇನ್ನೂರಕ್ಕೂ ಹೆಚ್ಚಿನ ಪುಟಗಳಿದ್ದ ಸದರಿ ಪುಸ್ತಕದ ಹೆಸರು: 'ಸತ್ಯದೊಂದಿಗೆ ನನ್ನ ಪ್ರಯೋಗಗಳು' ಬೆಲೆ: ಇಪ್ಪತ್ತು ರೂಪಾಯಿಗಳು. ಹಾಗೆ ನೋಡಿದರೆ, ಸುಮಾರು ವರ್ಷಗಳ ಹಿಂದೆ ಕೇವಲ ಬೆಲೆ ಕಡಿಮೆ ಅಂತನ್ನುವ ಕಾರಣಕ್ಕೇ ನಾನು ಕೂಡ 'ಗಾಂಧೀ ಆತ್ಮಕತೆ' ಖರೀದಿಸಿದ್ದುಂಟು. ಆವತ್ತು ಈ ಪುಸ್ತಕದ ಬೆಲೆ ಕುರಿತಂತೆ ಗೆಳೆಯನ ಉದ್ಗಾರ ನೋಡಿದಾಗ ಸರಳತೆ ಎಂಬ phenomenon ಹೇಗೆ ನಮಗೆಲ್ಲ ಅಗ್ಗದ ವಸ್ತುವಿನಂತೆ ಭಾಸವಾಗುತ್ತಿದೆಯಲ್ಲ ಅಂತೆನಿಸಿ ನಾಚಿಕೆಯಾಯಿತು. 

   ಕವಿತೆಯೂ ಥೇಟ್ ಹೀಗೆಯೇ. ಅದರಲ್ಲೂ ಹಾಯ್ಕು ಪ್ರಾಕಾರದ ಕವಿತೆಗಳು. ಸರಳತೆ ಮತ್ತು ಭವ್ಯತೆ 
ಹಾಯ್ಕುವಿನ ಎರಡು ಮಜಲುಗಳು. ಬಹುತೇಕ ಹಾಯ್ಕುಗಳು ಸರಳಾತಿ ಸರಳ ಪದಗಳಲ್ಲಿ 
ಹುಟ್ಟಿಕೊಂಡಂಥವು. ಹೀಗೆ ಸರಳವಾಗಿ ಓದಿಸಿಕೊಂಡು ಹೋಗಬಲ್ಲ ಹಾಯ್ಕುವೊಂದು ತನ್ನ ಕೊನೆಯ 
ಪದವನ್ನು ಓದಿಸಿಕೊಳ್ಳುತ್ತಿದ್ದಂತೆಯೇ ಓದುಗನಲ್ಲಿ ಒಂದು ಭವ್ಯ ಹೊಳಹನ್ನು ಹುಟ್ಟುಹಾಕಿರುತ್ತದೆ. 
ನನಗೆ ಬಂದಂಥ ಪ್ರತಿಕ್ರಿಯೆಗಳನ್ನು ನಂಬುವದಾದರೆ, ನನ್ನಬಹುತೇಕ ಲೇಖನಗಳಲ್ಲಿ ಓದುಗರಿಗೆ ಅತಿ 
ಹೆಚ್ಚು ಪ್ರಿಯವಾಗಿರುವಂಥದ್ದು ಈ ಹಾಯ್ಕುಗಳೇ. 

   ಇಂಥದೊಂದು ಕಾವ್ಯಜಗತ್ತಿಗೆ ಹೊಸದಾಗಿ ಕಾಲಿಟ್ಟ ಬಹುತೇಕರು ಕೇಳುವ ಮೊದಲ ಪ್ರಶ್ನೆಯೆಂದರೆ, 
ಹಾಯ್ಕು ಹೇಗೆ ಬರೆಯುವದು? ಈ ಆಟದ ನಿಯಮಗಳೇನು? ಈಗಾಗಲೇ ಇದೇ ಅಂಕಣದಲ್ಲಿ ಅನೇಕ ಸಲ 
ಹಾಯ್ಕುಗಳ ವಿವಿಧ ನಿಯಮಾವಳಿಗಳ ಬಗ್ಗೆ ಹೇಳಿರುವದರಿಂದ ಮತ್ತೇ ಅವುಗಳ ಬಗ್ಗೆ ಹೇಳದೇ 
ಹೊಸದಾದ ಮತ್ತು ಸರಳವಾಗಿ ಅಳವಡಿಸಕೊಳ್ಳಬಹುದಾದ ನಿಯಮಗಳ ಬಗ್ಗೆ ಯೋಚಿಸುತ್ತಿದ್ದಾಗ 
ಡೇವಿಡ್ ಎಂಬ ಹಾಯ್ಕು ಕವಿಯ ಒಂದಿಷ್ಟು ಮಾತುಗಳು ಆಸಕ್ತಿಕರ ಅಂತನಿಸಿದವು. 

   ಆತನ ಪ್ರಕಾರ, ಮೊಟ್ಟಮೊದಲನೆಯದಾಗಿ ಹಾಯ್ಕು ಕವಿತೆ ಅತ್ಯಂತ ಚಿಕ್ಕದಾಗಿರಬೇಕು. ಅಂದರೆ, 
ಒಂದು ಉಚ್ವಾಸ ಮತ್ತು ನಿಶ್ವಾಸಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದೋ, ಇಷ್ಟೇ ಅವಧಿಯಲ್ಲಿ 
ಓದಿ ಮುಗಿಸುವಷ್ಟು ಹಾಯ್ಕು ಚಿಕ್ಕದಿರಬೇಕು. ಎರಡನೆಯದಾಗಿ, ಭೂತವಲ್ಲದ ಭವಿಷ್ಯವಲ್ಲದ ಈ 
ನಮ್ಮ ಹಾಯ್ಕು ಯಾವಾಗಲೂ ವರ್ತಮಾನದಲ್ಲಿ ನಡೆಯುತ್ತಿರುವಂತೆ ಬಿಂಬಿತಗೊಂಡು ಒಂದು 
ನಿಶ್ಚಿತ ಘಟನೆಯ ಚಿತ್ರವನ್ನು ಕಟ್ಟಿಕೊಡುತ್ತಿರಬೇಕು. ಕೊನೆಯದಾಗಿ, ಈ ಚಿತ್ರ ಯಾವುದೋ ಅತ್ಯಂತ 
ಸಾಮಾನ್ಯ ಘಟನೆಯನ್ನು ಬಿಂಬಿಸುತ್ತಿದ್ದರೂ ಅದು ಒಂದು ಒಳನೋಟವನ್ನು ಬೆರಗಿನಿಂದ 
ಬಿಂಬಿಸುತ್ತಿರಬೇಕು ಮತ್ತು ಆ ಬೆರಗು ಗೌರವದಿಂದ ಕೂಡಿರಬೇಕು.

ಇಲ್ಲಿ ಒಂದಿಷ್ಟು ಅಂಥ ಚಿತ್ರಣಗಳಿವೆ. ಸಾಮಾನ್ಯವಾಗಿ ಹಾಯ್ಕುಗಳನ್ನು ವಿವರಿಸಲು ಹೋಗಬಾರದು. ಅದು ಹಾಯ್ಕು ಪರಂಪರೆಯಲ್ಲಿ ನಿಷಿದ್ಧ. ಆದರೆ ನಮ್ಮದಲ್ಲದ ಒಂದು ಹೊಸತನ್ನು ನಮ್ಮದಾಗಿಸಿಕೊಳ್ಳುವಾಗ ಒಂದಿಷ್ಟು ಸಣ್ಣ ಅಪರಾಧಗಳನ್ನು ಮಾಡಿದರೆ ತಪ್ಪಿಲ್ಲವಂತೆ!

   ಈ ಚಿತ್ರಣ ಗಮನಿಸಿ. ಇಲ್ಲಿಬ್ಬರು ಹೊಲದ ಕೆಲಸಕ್ಕೆಂದು ಹೊರಟಿರುವರು. ಮಧ್ಯವಯಸ್ಕ ತಾಯಿ 
ಮತ್ತು ಆಕೆಯ ಜವ್ವನ ಮಗಳು. ಗುಳೇ ಎದ್ದು ಈ ಊರಿಗೆ ಹೊಸದಾಗಿ ಬಂದಿರುವ ಈ ಜೋಡಿಗೆ 
ಇದು ಪರಿಚಿತ ದಾರಿಯಲ್ಲ. ಹೀಗಿರುವಾಗ, ಆಕಸ್ಮಿಕವಾಗಿ ಗುಲಾಬಿ ತೋಟವೊಂದು ಎದುರಿಗೆ 
ಸಿಕ್ಕುಬಿಡುತ್ತದೆ. ಸ್ವಂತ ಊರು ತೊರೆದು ಕಾಣದ ಭಾಗ್ಯವನ್ನರಿಸಿ ಹೊರಟಿರುವ ಈ ಜೋಡಿ ತಮ್ಮ 
ಅಂಥದೊಂದು ಅನಿಶ್ಚಿತ ಘಳಿಗೆಯಲ್ಲೂ ಹಾಯ್ಕು ಹುಟ್ಟಿಗೆ ಕಾರಣರಾಗುತ್ತಾರೆ. ಗುಲಾಬಿ ತೋಟ 
ಕಾಣುತ್ತಲೇ ಮಗಳ ಕೆದರಿದ ಕೂದಲನ್ನು ಒಟ್ಟುಗೂಡಿಸಿ ಲಗುಬಗೆಯಲ್ಲಿ ಜಡೆ ಹೆಣೆಯುತ್ತಿರುವ 
ತಾಯಿಯ ಚಿತ್ರವನ್ನು ಕವಿ ಕಟ್ಟಿಕೊಡುತ್ತಾನೆ.   

   ಮುಂದೊಮ್ಮೆ ಈ ಜೋಡಿ ಹೊಲ ತಲುಪುತ್ತದೆ. ಇಳಿಸಂಜೆಯವರೆಗೂ ಕೆಲಸ ಮಾಡುತ್ತ ಹೈರಾಣಾಗಿರುವ ಅಮ್ಮ ಒಂದೆಡೆ ಕೂತು ಸುಧಾರಿಸಿಕೊಳ್ಳುತ್ತಿದ್ದರೆ, ಜಾಲರಿ ಬಲೆಯಂಥ ರವಿಕೆ ತೊಟ್ಟಿರುವ ಮಗಳು ಉತ್ಸಾಹದಲ್ಲೇ ಮುಂದುವರೆಯುತ್ತಿದ್ದಾಳೆ. ಇಳಿಸಂಜೆಯ ಹೊತ್ತಿನಲ್ಲಿ ಅವಧಿಗೂ ಮುನ್ನವೇ ಮೂಡಿರುವ ಪೂರ್ಣಚಂದಿರ. ಅವನಿಗೂ ಈ ಜಾಲರಿ ರವಿಕೆಯ ಜವ್ವನೆ ಬಗ್ಗೆ ಕುತೂಹಲ. ಬೆವರಿನಿಂದ ಜ್ವಲಿಸುತ್ತಿರುವ ಈ ಶ್ವೇತವರ್ಣೆಯನ್ನು ತಂಪಾಗಿಸಲು ಸ್ವತಃ ತಾನೇ ಕೆಳಗಿಳಿಯುತ್ತಿದ್ದಾನೆ. ಸಾಂತ್ವನಗೈದ ಪೂರ್ಣಚಂದಿರ ಬಲೆಯಿಂದ ಹೊರಬರಲಾಗದೇ ಕೊನೆಗೊಮ್ಮೆ ಜಾಲರಿಯಲ್ಲೇ ಸ್ಥಾಪಿತನಾಗಿ ಹೋದನೆಂಬ ಕತೆ ನಂಬಲು ಬಲು ಮಜವಾಗಿದೆ! 

   ಸಮಾಧಾನದ ಸಂಗತಿ ಏನೆಂದರೆ, ಜಗತ್ತಿನ ಯಾವ ಹಾಯ್ಕು ಕೂಡ ಅಂತ್ಯದಲ್ಲಿ ನಮ್ಮನ್ನು ನಿರಾಸೆಗೊಳಿಸುವದಿಲ್ಲ. ಇವಳನ್ನು ನೋಡಿ: ಇವಳೊಬ್ಬಳು ವಿವಾಹಿತ ಕನ್ಯೆ! ಕನ್ಯೆ ಹೇಗೆಂದರೆ, ಮದುವೆಯಾದ ದಿನವೇ ಆಕೆಯ ಧೀರನಿಗೆ ಸೇನೆಯಿಂದ ಕರೆಬಂದು ಯುದ್ಧಕ್ಕೆ ತೆರಳಿದ್ದಾನೆ. ಇಲ್ಲೀಗ ಚಳಿಗಾಲ. ದೂರದಲ್ಲೆಲ್ಲೋ ಧೀರ ತನ್ನ ಶತ್ರುಗಳೊಂದಿಗೆ ಯುದ್ಧ ತಲ್ಲೀನನಾಗಿದ್ದರೆ ಈಕೆ ಇಲ್ಲಿ ನಡುಗುವ ಋತುಮಾನದೊಂದಿಗೆ ಕಾದಾಡುತ್ತಿದ್ದಾಳೆ. ಬೇಸಿಗೆ ಕಳೆದ ಮೇಲೆ ಬಂದೇ ಬರುವೆನೆಂದು ಹೇಳಿಹೋಗಿರುವ ಗಂಡ. ಇಲ್ಲಿಯವರೆಗೂ ಆತನಿಂದ ಒಂದು ಸುದ್ದಿಯಿಲ್ಲ. ಒಂದು ಪತ್ರವಿಲ್ಲ. ವಿರಹದಲ್ಲಿರುವ ಚೆಲುವೆಗೋ ಕಾಲಮಾನದ ಅರಿವೇ ಇದ್ದಂತಿಲ್ಲ. ಪ್ರತಿದಿನ ತನ್ನ ಮನೆಯ ಗೇಟಿಗೆ ಅಳವಡಿಸಲಾದ ಅಂಚೆಡಬ್ಬದಲ್ಲಿ ಪತ್ರಕ್ಕಾಗಿ ತಡಕಾಡುವದು. ಅನ್ಯಮನಸ್ಕಳಾಗಿ ಹಿಂತಿರುಗುವದು. ಇಂತಿಪ್ಪ ಸನ್ನಿವೇಶದಲ್ಲಿ ರೊಮೇನಿಯಾದ ದಾನಾ ಮಾರಿಯಾ ಎಂಬ ಕವಿಯತ್ರಿ ಹೇಗೆ ಅಲ್ಲಿನ ಋತುಮಾನದ ಜೊತೆಗೆ ಅಲ್ಲಿನ ಇಡೀ ಸನ್ನಿವೇಶವನ್ನೂ ಚಕ್ಕಂತ ಬದಲಾಯಿಸುತ್ತಾಳೆ ನೋಡಿರಿ. ಎಂದಿನಂತೆ ಅಂಚೆ ಹುಡುಕಲು ಹೋದ ಕನ್ಯೆಗೆ ಅಲ್ಲೇನು ಕಾಣಿಸುತ್ತಲಿದೆ ನೋಡಿರಿ: 

ಇದ್ಯಾವುದರ ಸೂಚನೆ
ಬಿಸಿಲ ನಿರ್ಗಮನದ್ದೋ?
ಶರತ್ಕಾಲ ಆಗಮನದ್ದೋ?
ಬೇಲಿ ಬಾಗಿಲಕ್ಕೆ ತೂಗುಹಾಕಿದ
ಅಂಚೆಡಬ್ಬದಲ್ಲಿ ಎಲೆಯೊಂದು ಪತ್ರವಾಗಿದೆ.
                                                                                        -             
 
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 27.09.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

Wednesday, September 13, 2017

ಅದ್ಯಾವ ಪಂಥದವನೇ ಆಗಿರಲಿ, ಅವನನ್ನು ಮೊದಲು ನೇಣಿಗೇರಿಸಲಿ

ರೈಲಿನಲ್ಲಿ ಕುಳಿತಿರುವ ಮದುಮಗಳಿಗೆ ಅಂಗೈ 
ಮೆಹಂದಿ ಯಾಕೆ ಕೆಂಪೇರಿಲ್ಲ ಅನ್ನುವ ಚಿಂತೆ.
ವಿಮಾನದಲ್ಲಿ ಹುರಿದ ಮೀನು ತಿನ್ನುತ್ತಿರುವ ಮದುಮಗನಿಗೆ
ಎಂದೋ ನೋಡಿದ್ದ ಯಾರದೋ ಮೀನಖಂಡದ ಚಿಂತೆ. 
ವರವೋ ಶಾಪವೋ ಶಪಥವೋ ಅಂತೂ ಇಂತೂ 
ಎಲ್ಲರಲ್ಲೂ ವ್ಯಥೆಯೊಂದು ಓಡುತ್ತಲೇ ಇರುತ್ತದಂತೆ;
ತೊಟ್ಟಬಾಣವ ಮರಳಿ ತೊಡಬಾರದಂತೆ!

   ಸುಮಾರು ವರ್ಷಗಳ ಹಿಂದೆ ತಮಾಷೆಗೆಂದು ಬರೆದಿದ್ದ ಕವಿತೆಯಿದು. ಅಸಲಿಗೆ ಇಲ್ಲಿ ಒಬ್ಬೊಬ್ಬರದು ಒಂದೊಂದು ಚಿಂತೆ. ನನಗೋ ಆಫೀಸಿಗೆ ತಡವಾಗುತ್ತಿದೆ ಅಂತನ್ನುವ ಚಿಂತೆ. ಹಾಗಂದುಕೊಂಡೇ ಮೊನ್ನೆ ಹೋಟೇಲಿನಲ್ಲಿ ತಿಂಡಿ ಮುಗಿಸಿ ಇನ್ನೇನು ಗಾಡಿ ತೆಗೆಯೋಣ ಅಂತ ಹೊರಗೆ ಬಂದೆ. ನೋಡಿದರೆ ರಸ್ತೆಯಲ್ಲಿ ಏಳೆಂಟು ಜನರ ಒಂದು ಗುಂಪು. ಬೆಂಗಳೂರಿನ ಮುಖ್ಯರಸ್ತೆಯ ತಿರುವಿನಲ್ಲೊಂದು ಎಂಥದೋ ಜಗಳ. ಒಂದು ಆಟೋ, ಒಂದು ಕಾರು ಇಡೀ ರಸ್ತೆಗೆ ಅಡ್ಡಹಾಕಿಕೊಂಡು ನಿಂತುಬಿಟ್ಟಿದ್ದಾರೆ. ನೋಡನೋಡುತ್ತಲೇ ಎರಡು ನಿಮಿಷದಲ್ಲೇ ಟ್ರಾಫಿಕ್ ಜಾಮ್. 'ಪೊಂಪೊಂ' ಅಂತನ್ನುವ ಹಾರ್ನುಗಳ ಜುಗಲ್ ಬಂದಿ. ಚಾಲಕರಿಬ್ಬರೂ ತಮ್ಮ ಗಾಡಿ ತೆಗೆಯಲೊಲ್ಲರು. ಹಾರ್ನು ಬಜಾಯಿಸುತ್ತಿರುವ ಯಾರೊಬ್ಬರೂ ತಮ್ಮ ವಾಹನದಿಂದ ಇಳಿದು ಜಗಳ ಬಿಡಿಸಲೊಲ್ಲರು.

   ನಾನೂ ಅದೇ ಮಾರ್ಗವಾಗಿ ಹೋಗಬೇಕಿತ್ತು. ಏನಾಗಿದೆ ನೋಡೋಣ ಅಂತ ಗುಂಪಿನ ಕಡೆಗೆ ಹೋದೆ. ಚಾಲಕರಿಬ್ಬರ ಜಗಳ ನಿರಾತಂಕವಾಗಿ ಸಾಗುತ್ತಲೇ ಇತ್ತು. ಅವರಿಗೋ ಹಿಂದೆ ಸಾಲುಗಟ್ಟಿ ನಿಂತಿರುವ ವಾಹನಗಳ ಪರಿವೆಯೇ ಇಲ್ಲ. ರಸ್ತೆಗೆ ಅಡ್ಡಲಾಗಿ ನಿಂತಿದ್ದ ಕಾರು, ಆಟೋ ಎರಡನ್ನೂ ಗಮನಿಸಿದೆ. ಯಾವ ಅಪಘಾತದ ಕುರುಹೂ ಕಾಣಲಿಲ್ಲ. ಇವರಿಬ್ಬರನ್ನೂ ಗಮನಿಸಿದೆ. ಇಬ್ಬರಿಗೂ ಏನೂ ಗಾಯದ ಲಕ್ಷಣ ಗೋಚರಿಸಲಿಲ್ಲ. ವಿಷಯದ ತಳಬುಡ ಏನೆಂದು ಗೊತ್ತಾಗದೇ ಅವರಿಬ್ಬರ ಮಧ್ಯೆ ಹೋಗಿ ನಿಧಾನವಾಗಿ ಕೇಳಿದೆ:

"ಸಾರ್, ಸಾರ್.. ಏನಾಯ್ತು ಸಾರ್?" 
'ಏನೂ ಆಗಿಲ್ಲ..'
"ಗಾಡಿಗೆ ಏನಾದ್ರೂ ಆಯಿತೇ?"
'ಏನೂ ಆಗಿಲ್ಲ..'
"ನಿಮಗೇನಾದರೂ ಆಯಿತೇ?"
'ಏನೂ ಆಗಿಲ್ಲ..'
"ಮತ್ಯಾಕೆ ಜಗಳ ಸಾರ್?"
'ಏನೂ ಆಗಿಲ್ಲ ಕಣ್ರೀ, ಏನಾದ್ರೂ ಆಗಿದ್ದರೆ..?'                   

   ಇದು ಈ ಲೋಕದ ರೀತಿ. ಬಹುಶಃ ಇವತ್ತೇನೋ ಇವರಿಬ್ಬರೂ ಆರಾಮಾಗಿದ್ದಾರೆ. ಹೀಗಾಗಿ ಇವರಿಬ್ಬರ ಓತಪ್ರೋತಕ್ಕೆ ಹಿಂದೆ ನಿಂತಿರುವ ಜನಪ್ರವಾಹದ ಹಂಗಿಲ್ಲ. ಕೊನೆಗೆ ಏನು ಮಾಡುವದೆಂದು ಗೊತ್ತಾಗದೇ ತಲೆಕೆಟ್ಟು ನನ್ನ ಮೊಬೈಲ್ ತೆಗೆದೆ. ಅವರಿಬ್ಬರಿಗೂ ಕಾಣುವಂತೆ ಅವರ ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದೆ. ಅನಂತರ ಅವರಿಬ್ಬರಿಗೂ ಕೊಂಚ ನಿಧಾನವಾಗಿ ಸ್ಪಷ್ಟವಾಗಿ ಹೇಳಿದೆ:
"ನೋಡಿ, ಎರಡೂ ಗಾಡಿ ಸೈಡಿಗೆ ಹಾಕಿ ಮಾತಾಡ್ಕೊಳ್ಳಿ. ಇಲ್ಲವಾದಲ್ಲಿ ಟ್ರಾಫಿಕ್ಕಿಗೆ ತೊಂದರೆ ಮಾಡ್ತಾ ಇದೀರಂತ ಕಂಟ್ರೋಲ್ ರೂಮಿಗೆ ನಾನೇ ಕಂಪ್ಲೇಂಟ್ ಮಾಡ್ತೀನಿ.."

   ಅಷ್ಟೇ! ದಿಢೀರೆಂದು ಮೂಡು ಬದಲಾಗಿತ್ತು. ಇಬ್ಬರೂ ವಾಹನ ಚಾಲಕರು ಕೊಂಚ ಗಲಿಬಿಲಿಯಾದರು. ನಮ್ಮಷ್ಟಕ್ಕೆ ನಾವು ಜಗಳ ಮಾಡಿಕೊಂಡು ಆರಾಮಾಗಿದ್ದರೆ ಇವನದೇನಯ್ಯ ಕಿತಾಪತಿ? ಅಂತ ನನ್ನನ್ನು ಅಸಹನೆಯಿಂದ 
ನೋಡಿದರು. ಕೊನೆಗೆ ಅಸ್ಪಷ್ಟವಾಗಿ ಏನೋ ಬೈದುಕೊಂಡು ಗಾಡಿ ತೆಗೆದರು. ಟ್ರಾಫಿಕ್ ಚಲಿಸತೊಡಗಿತು. ಬದುಕಿನಲ್ಲಿ ಇವರಿಬ್ಬರನ್ನು ಮತ್ತೊಮ್ಮೆ ನಾನು ಭೇಟಿ ಆಗುತ್ತೇನೆಯೋ ಇಲ್ಲವೋ ಅಂತನ್ನುವ ಗ್ಯಾರಂಟಿಯಿಲ್ಲವಾದ್ದರಿಂದ ಅವರ ಅಸಹನೆಯ ನೋಟವನ್ನೂ, ಅಸ್ಪಷ್ಟ ಗೊಣಕುವಿಕೆಯನ್ನೂ ಅಲ್ಲೇ ರಸ್ತೆ ಬದಿಯಲ್ಲಿ ಝಾಡಿಸಿಕೊಂಡು ಏನೋ ಘನಂದಾರಿ ಮಾಡಿದವನಂತೆ ನನ್ನ ಗಾಡಿಯತ್ತ ನಡೆದೆ. 

   ಗಾಡಿ ಓಡಿಸುತ್ತಲೇ ನನ್ನ ಮನದಲ್ಲಿ ಮೂಡುತ್ತಿದ್ದುದು ಒಂದೇ ಪ್ರಶ್ನೆ: ರಸ್ತೆಯಲ್ಲಿನ ಇಂಥ ಅನಪೇಕ್ಷಿತ ಜಗಳಕ್ಕಿಂತ ಸಾಮಾಜಿಕ ತಾಣಗಳಲ್ಲಿನ ಜಗಳಗಳು ಹೇಗೆ ಭಿನ್ನ? ಆ ಕ್ಷಣದಲ್ಲಿ ನನಗೇನೂ ಅಷ್ಟೊಂದು ಫರಕು ಕಾಣಲಿಲ್ಲ. ಮೊನ್ನೆ ಅನಾಮಧೇಯರ ಗುಂಡಿಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದರು. ಸದರಿ ಘಟನೆಯ ಬಗ್ಗೆ ಫೇಸ್ ಬುಕ್ಕಿನಲ್ಲಿ ಎಷ್ಟು ತೆರನಾದ ವಾಗ್ವಾದಗಳು ನಡೆಯಬಹುದೋ ಅಷ್ಟೂ ರೀತಿಯ ಪರ್ಮುಟೇಶನ್ ಮತ್ತು ಕಾಂಬಿನೇಷನ್ ಹೊರಬಂದವು. 

   ಸದರಿ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ನಾನಾರೀತಿಯ ಹೇಳಿಕೆಗಳು ಫೇಸ್ ಬುಕ್ಕಿನಲ್ಲಿ ಜೀವಪಡೆದುಕೊಳ್ಳತೊಡಗಿದವು. ಇದು ಬಲಪಂಥೀಯರ ಕೆಲಸವೆಂದು ಎಡಪಂಥೀಯರು ಹೇಳಿಕೆ ಕೊಟ್ಟರು. ಮರುಕ್ಷಣವೇ ಬಲಪಂಥೀಯರ ಬಾಣ ನಕ್ಸಲ್ ವಾದದತ್ತ ತಿರುಗಿತು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ರಾಜಕಾರಣದ ಜರೂರತ್ತು ಇರುವದರಿಂದ ಹೀಗೆ ಒಬ್ಬರ ಮೇಲೊಬ್ಬರು ಬೆರಳು ತೋರಿಸುವದು ಸಹಜ. ಆದರೆ ಈ ಜರೂರತ್ತಿನ ಹಂಗು ನಮ್ಮಂಥ ಜನಸಾಮಾನ್ಯರಿಗೆ ಇರಬೇಕಿಲ್ಲ. ನಮ್ಮೊಳಗಿನ ಮನುಷ್ಯತ್ವ ಜಾಗೃತವಾಗಲು ಗೌರಿ ಲಂಕೇಶ್ ಒಬ್ಬ ಪತ್ರಕರ್ತೆಯಾಗಿದ್ದರು ಅಂತನ್ನುವ ವಿಶೇಷಣ ಕೂಡ ನಮಗೆ ಬೇಕಿರಲಿಲ್ಲ. ಅದರ ಬದಲಿಗೆ, ಹತ್ಯೆ ಆಗಿರುವದು ಒಬ್ಬ ಮನುಷ್ಯ ಅನ್ನುವದಷ್ಟೇ ಸಾಕಿತ್ತು. 

   ಆದರೆ ಹತ್ಯೆ ಕುರಿತಂತೆ ತಮ್ಮದೇ ರೀತಿಯಲ್ಲಿ ತಹತಹಿಸುತ್ತಿದ್ದ ದೊಡ್ಡದೊಂದು ಗುಂಪಿಗೆ ಇದ್ಯಾವುದೂ ಬೇಕಿರಲಿಲ್ಲ. ಈ ಗುಂಪಿನಲ್ಲಿ ನಳನಳಿಸುತ್ತಿದ್ದಿದ್ದು ಸಿದ್ಧಾಂತವಷ್ಟೇ. ಈ ಗುಂಪಿನಲ್ಲಿ ಎಡದವರೂ ಇದ್ದರು. ಬಲದವರೂ ಇದ್ದರು. ಒಂದು ಭಿನ್ನವಿಚಾರವನ್ನು ಹತ್ತಿಕ್ಕುವದಕ್ಕಾಗಿ ಕೊಲೆಯನ್ನೇ ಮಾಡಬಹುದೇ? ಅಂತ ಪ್ರಶ್ನಿಸುತ್ತಿದ್ದವರೇ ಕೊಲೆಗೆ ಸಂಬಂಧಿಸಿದಂತೆ ಯಾರಾದರೂ ಭಿನ್ನ ಆಲೋಚನೆಯನ್ನು ವ್ಯಕ್ತಪಡಿಸಿದರೆ, ತಕ್ಷಣ ಅಂಥವರ ಮೇಲೆ ಮುಗಿದು ಬೀಳುತ್ತಿದ್ದರು. ಆ ಮೂಲಕ ತಾವು ಅಲ್ಲಿಯವರೆಗೂ ಯಾವುದನ್ನು ಪ್ರಚುರಪಡಿಸುತ್ತಿದ್ದರೋ, ಅಂಥ ಭಿನ್ನ ಅಭಿಪ್ರಾಯಗಳಿಗೆ ಮನ್ನಣೆ ಕೊಡುವದನ್ನೇ ಮರೆಯುತ್ತಿದ್ದರು. ಈ ಗುಂಪಿಗೆ ಸ್ಪರ್ಧೆಗೆ ಬಿದ್ದವರಂತೆ ಇನ್ನೊಂದು ಗುಂಪು ಇನ್ನೊಂದು ರೀತಿಯಲ್ಲಿ ಅಧಃಪತನದತ್ತ ಹೊರಟಿತ್ತು. ಮನುಷ್ಯನ ಸಾವನ್ನೂ ಕೂಡ ಗೇಲಿ ಮಾಡಿಕೊಂಡು ಸಂಭ್ರಮಿಸುತ್ತ ಮನುಷ್ಯರ ಪಟ್ಟಿಯಿಂದ ತನ್ನ ಹೆಸರನ್ನು ಅಳಿಸಿಕೊಳ್ಳುವತ್ತ ದಾಪುಗಾಲಿಡುತ್ತಿತ್ತು. 

   ಒಂದು ಸಹಜ ಮತ್ತು ಅಕಾಲಿಕ ಸಾವಿಗೆ ಎಷ್ಟೊಂದು ಮುಖಗಳು? ಒಂದು ಸಾವಿನ ಹಿನ್ನೆಲೆಯಲ್ಲಿ ಬೆಳಕನ್ನು ಅರಸಿಕೊಂಡು ಹೋದವರೆಷ್ಟು? ಒಂದು ಹತ್ಯೆಯ ಮುಸುಕಿನಲ್ಲಿ ಕಳ್ಳನಗೆ ಬೀರಿದವರೆಷ್ಟು? ಇವರಿಬ್ಬರ ಮಧ್ಯೆ ಏನನ್ನೂ ಹೇಳಲಾಗದೇ, 'ಅದ್ಯಾವ ಪಂಥದವನೇ ಆಗಿರಲಿ, ಆದಷ್ಟು ಬೇಗ ಆತ ನೇಣಿಗೇರುವಂತಾಗಲಿ' ಅಂತ ಮನದಲ್ಲೇ ಮರುಗಿದವರೆಷ್ಟೋ?

   ಹಾಗೆ ನೋಡಿದರೆ, ಮನುಷ್ಯತ್ವ ಮತ್ತು ಕಾಮನ್ ಸೆನ್ಸ್ ಇರುವ ಮನುಷ್ಯ ಒಂದು ಸಾವಿಗೆ ಸಂಬಂಧಪಟ್ಟಂತೆ ಮೌನಕ್ಕೆ ಮೊರೆ ಹೋಗಬೇಕು. ಇನ್ನು ಆ ಸಾವು ಅಸಹಜ ಮತ್ತು ದಾರುಣವಾಗಿದ್ದಲ್ಲಿ ಸುತ್ತಲಿನ ಸಮಾಜ ಅಂಥದೊಂದು ಘಟನೆಯೆಡೆಗೆ ತನ್ನ ಸಾತ್ವಿಕ ಸಿಟ್ಟು ಪ್ರದರ್ಶಿಸಬೇಕು. ಆ ಸಿಟ್ಟು ಸಮಾಜಘಾತಕ ಶಕ್ತಿಗಳಿಗೆ ಪ್ರತಿರೋಧ ಮತ್ತು ಎಚ್ಚರಿಕೆ ನೀಡುವಂತಿರಬೇಕೇ ಹೊರತು ಅಲ್ಲಿ ಸಿದ್ಧಾಂತಗಳ ವಾಸನೆಯೂ ಇರಕೂಡದು. ಯಾಕೆಂದರೆ, ಸಿದ್ಧಾಂತಗಳು ಬದುಕಿಗೆ ಮುಖ್ಯವೇನೋ ಹೌದು. ಆದರೆ ಇವೇ ಸಿದ್ಧಾಂತಗಳು ಬದುಕಿನ ಸಣ್ಣಪುಟ್ಟ ಖುಷಿ, ಜಗಳ, ನಂಬಿಕೆ ಮತ್ತು ಜೀವನಪ್ರೀತಿಗಳನ್ನು ಕಸಿದುಕೊಳ್ಳುತ್ತವೆ ಅಂತಾದರೆ ಅಂಥ ತರ್ಕ-ಸಿದ್ಧಾಂತಗಳಿಗೆ ಬೆಲೆಯಿಲ್ಲವೆಂದೇ ಅರ್ಥ.                      

   ಹೀಗಾಗಿ ವೈಯಕ್ತಿಕವಾಗಿ ನಾನು ಯಾವ ಪಂಥವನ್ನೂ ಅಷ್ಟಾಗಿ ತಲೆಗೆ ಹಚ್ಚಿಕೊಂಡಿಲ್ಲ. ಇಷ್ಟಕ್ಕೂ ‘ನಾನು ಎಡಪಂಥೀಯ, ನೀನು ಬಲಪಂಥೀಯ’ ಅಂತ ಲೇಬಲ್ ಹಚ್ಚುವ, ಹಚ್ಚಿಕೊಂಡಿರುವ ಮನುಷ್ಯ ತನ್ನ ದಾರಿಯನ್ನು ಆದಷ್ಟು ನ್ಯಾರೋ ಮಾಡಿಕೊಳ್ಳುತ್ತ ಹೋದರೆ, ಇನ್ನು 'ನಾನು ನಡುಪಂಥೀಯ!' ಅಂತ ತನ್ನನ್ನು ತಾನೇ ಘಂಟಾಘೋಷವಾಗಿ ಗೇಲಿ ಮಾಡಿಕೊಳ್ಳುತ್ತ ಎಲ್ಲವನ್ನೂ ಗಮನಿಸುತ್ತ ಸಾಗುವ ಮನುಷ್ಯ ತನ್ನ ದಾರಿಯನ್ನು ಅಗಲವಾಗಿಸಿಕೊಳ್ಳುತ್ತ ಹೋಗುತ್ತಾನೆ-

ಅಂತ ಯೋಚಿಸುತ್ತಿದ್ದಂತೆ ನನ್ನ ಗಾಡಿ ಆಫೀಸಿನ ಪಾರ್ಕಿಂಗ್ ಜಾಗ ತಲುಪಿತ್ತು. ಗಾಡಿ ನಿಲ್ಲಿಸಿ ಹೊರಡುತ್ತಿದ್ದಾಗ ರಸ್ತೆಯ ಬದಿಯಲ್ಲೊಂದು ಕೆಂಪು ಸ್ಕರ್ಟಿನ ಚೆಲುವೆ. ಒಂದು ಕ್ಷಣಭಂಗುರದ ಘಟನೆ ಮುಂದಿನ ಎರಡು ಸಾಲುಗಳನ್ನು ಬರೆಯುವಂತೆ ಒತ್ತಾಯಿಸುತ್ತಿದೆ. 

   ಮತ್ತೇನಿಲ್ಲ, ಮೇಲಿರುವವನು ಬಲು ಜಾಣ ಕಣ್ರೀ. ತುಂಟಗಾಳಿ ಸೃಷ್ಟಿಸುವವನೂ ಅವನೇ. ತೊಟ್ಟ ಸ್ಕರ್ಟು ಹಾರಿಸುವವನೂ ಅವನೇ. ಮತ್ತು, ಇದನ್ನೆಲ್ಲ ನೋಡಬಯಸಿದ ನೂರಾರು ಕಣ್ಣುಗಳಲ್ಲಿ ಧೂಳು ಚಿಮುಕಿಸುವವನೂ ಅವನೇ! ಇಲ್ಲಿ ಯಾರಿಗೆ ಯಾರು ಬೇಲಿ? ಯಾರಿಗೆ ಯಾರೋ ಪುರಂದರ ವಿಠಲ-ಅಂತ ದಾಸರ ಕ್ಷಮೆ ಕೋರುತ್ತ ನಡೆಯತೊಡಗಿದೆ..
                                                                               -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 13.09.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)