Thursday, December 1, 2011

ಒಂದು ಟಾಯ್ಲೆಟ್ಟು!

ಸ್ನೇಹಿತರೆ,
'ಕನಸು-ಕನವರಿಕೆ'ಯಲ್ಲಿನ ಕೆಲವೊಂದು ಬರಹಗಳಿಗೆ ಓದುಗರು ಹ್ಯಾಗೆ ಸ್ಪಂದಿಸುತ್ತಾರೆ ಮತ್ತು ಅದು ಇನ್ಯಾವುದೋ ಮಜಲಿಗೆ,
ಮತ್ಯಾವುದೋ ಒಂದು ಅರಿವಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ ಎಂಬುದಕ್ಕೆ ಕೆಳಗಿನ ಒಂದು ಪ್ರತಿಕ್ರಿಯೆ ಗಮನಿಸಿ.
ನಿಮಗೂ ಖುಷಿಯಾದೀತು. 






ಸರ್,
'ಕನಸು- ಕನವರಿಕೆ'ಯಲ್ಲಿ ಬರಹ "ಕೊಟ್ಟ ಕುದುರೆ ಏರಲಾಗದವ" ಚೆನ್ನಾಗಿತ್ತು.
ಅದರಲ್ಲಿ ಬರುವ 'ಯಾವ ರಾಜನೂ ಪ್ರಜೆಗಳಿಗೆ ಸಂಡಾಸ್ ಮನೆ' ಕಟ್ಟಿಸಲಿಲ್ಲವೇ? ಎಂಬ ಪ್ರಶ್ನೆ ಕುತೂಹಕಲಕರ. ಈಚೆಗೆ ಕನ್ಯಾಕುಮಾರಿ ಪ್ರವಾಸಕ್ಕೆ ಹೋಗಿದ್ದಾಗ, ಮಾರ್ಗ ಮಧ್ಯೆ ಪದ್ಮನಾಭಪುರಂ ಅರಮನೆ ನೋಡಿದೆ. ಅದರಲ್ಲಿ ರಾಜಕುಟುಂಬದ ಸದಸ್ಯರಿಗೆಂದೇ ಶೌಚಾಲಯ ಕಟ್ಟಲಾಗಿದೆ; ಮತ್ತು ಅದು ಈಗಿನ ಶೈಲಿಯಲ್ಲೇ ಇದೆ!
ನಮ್ಮೂರಿನ (ಕೊಪ್ಪಳ) ಸಮೀಪ ಬಹದ್ದೂರ್ ಬಂಡಿ ಎಂಬ ಗ್ರಾಮದ ಹೊರಗೆ ಕೋಟೆಯಿದೆ. ಅಲ್ಲಿ ಸಹ ಕೋಟೆ ಗೋಡೆಯೊಳಗೆ ಶೌಚಾಲಯಗಳಿವೆ. ಪ್ರಾಯಶಃ ಈ ಬಗ್ಗೆ ಸಂಶೋಧಕರು ಇನ್ನಷ್ಟು ಗಮನ ಹರಿಸಬೇಕು ಎಂಬುದು ನನ್ನ ಅನಿಸಿಕೆ.
ಅಂದ ಹಾಗೆ, ನುಣುಪಾದ ಕಲ್ಲಿನಿಂದ ಕಟ್ಟಿದ ಶೌಚಾಲಯದ ಫೋಟೋ ಕಳಿಸುತ್ತಿದ್ದೇನೆ ನೋಡಿ; ಇದು 300 ವರ್ಷಗಳ ಹಿಂದೆಯೇ ಕಟ್ಟಿದ್ದಂತೆ (ಪದ್ಮನಾಭಪುರಂ ಅರಮನೆಯಲ್ಲಿರುವುದು)...!

ವಂದನೆಗಳು

--
 regards
 AnandaTeertha Pyati
 - - - - - - - - - - - - - -
 Sr. Reporter,  'Prajavani'

ಶೀಯುತ ಆನಂದತೀರ್ಥರೇ,
ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಖುಷಿಯೆನಿಸಿತು.ನನಗನಿಸಿದಂತೆ ಒಂದು ಪ್ರಬಂಧಕ್ಕೆ ಸಂಬಂಧಿಸಿದಂತೆ
ನೀವು ಕೊಟ್ಟಿರುವ ಉತ್ತರ ಮತ್ತು ಅಭಿಪ್ರಾಯ ನೋಡಿ ಮನಸ್ಸು ತುಂಬಿದೆ.ಮತ್ತೇ,ನಿಮ್ಮ ಈ ಪತ್ರ ಕುತೂಹಲಕರ 
ಎನಿಸಿದ್ದರಿಂದ ಮತ್ತು ಇಂಥದೊಂದು ವಿಷಯ ಎಲ್ಲರಿಗೂ ಗೊತ್ತಾಗಬೇಕೆಂಬ ಆಸೆಯಿಂದ ನಿಮ್ಮ ಇಡೀ ಪತ್ರದ 
ಸಾರಾಂಶವನ್ನು ಬ್ಲಾಗಿನ ಅನಿಸಿಕೆಗಳಲ್ಲಿ ನಿಮ್ಮ ಪರವಾಗಿ ಹಾಕಬೇಕೆಂದಿದ್ದೇನೆ.ನಿಮ್ಮ ಅನುಮತಿಯಿಲ್ಲದೇ 
ತೆಗೆದುಕೊಂಡಿರುವ ನನ್ನ ಉತ್ಸಾಹಕ್ಕೆ ನಿಮ್ಮ ಕ್ಷಮೆ ಇರಲಿ.. :-)  
ಅನಂತ ಪ್ರೀತಿಯೊಂದಿಗೆ,

-RJ

Monday, November 28, 2011

ಕೊಟ್ಟ ಕುದುರೆ ಏರಲಾಗದವ ಯಾವ ಸೀಮೆಯ ಧೀರ?

                                           Photo: Internet


"ಆಜಾ,ಆಜಾ..ಅಬ್ ಕೈಸಾ ಶರ್ಮಾನಾ..."
ರೇಡಿಯೋ ಸುಮ್ಮನೇ ತನ್ನ ಪಾಡಿಗೆ ತಾನು 'ಆಶಿಕಿ' ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಿತ್ತು.
ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ನೀರುದೋಸೆಯ ಅಮಲಿನಲ್ಲಿದ್ದೆ. ಅಡುಗೆ  ಮನೆಯಲ್ಲಿದ್ದ ಅಕ್ಕ ಇದ್ದಕ್ಕಿದ್ದಂತೆ ಹೊರಬಂದು, "ಎಲ್ಲಾ ನಿನ್ನ ಗುಣಗಳೇ ಬಂದಾವಲ್ಲೋ ಪುಟ್ಟಿಗೆ.." ಅಂತ ತನ್ನ 
ಮಗಳನ್ನು ಕುರಿತು ಹೇಳುತ್ತಿದ್ದಳು. ಶೋಕೇಸ್ ನಲ್ಲಿದ್ದ ಪುಟ್ಟಿಯ ಪ್ರಶಸ್ತಿ, ಫಲಕಗಳನ್ನು ನೋಡುತ್ತ 
ನಾನು ಪುಟ್ಟಿಯತ್ತ ಒಂದು ಕಣ್ಣು ಹೊಡೆದು ತುಂಟ ನಗೆ ಬೀರಿ 'ಹೆಂಗೆ?' ಅಂತಂದು ನನ್ನ ಕಾಲರ್ ಸರಿಪಡಿಸಿಕೊಳ್ಳತೊಡಗಿದೆ.

"ಥೋ ನಿನ್ನ.. ಕಾಲರ್ರು ಆಮೇಲೆ ಎತ್ಕೋ! ನಾಲ್ಕನೇ ಕ್ಲಾಸಿಗೆ ಬಂದರೂ ಪುಟ್ಟಿ ಹಾಸಿಗೆಯಲ್ಲಿ ಉಚ್ಚೆ 
ಹೊಯ್ತಾಳಲ್ಲೋ..." ಅಕ್ಕ ಬೇಜಾರಿನಿಂದ ಹೇಳುತ್ತಿದ್ದಳು. ಹೊಗಳಿಕೆಯ ನಿರೀಕ್ಷೆಯಲ್ಲಿದ್ದವನಿಗೆ 
ಯಾರೋ ಬಂದು ರಪರಪ ಅಂತ ಬಾರಿಸಿದಂತಾಯಿತು. ಅಷ್ಟೊತ್ತು ನನ್ನ ಮುಖದಲ್ಲಿದ್ದ ತುಂಟನಗೆ 
ಈಗ ಪುಟ್ಟಿಯ ಮುಖಕ್ಕೆ ವರ್ಗಾವಣೆಯಾಗಿತ್ತು..

                                                                                      *
ಏನಂತ ಹೇಳೋದು ಹೇಳಿ. ನನ್ನ ಪೈಮರಿ ಮತ್ತು ಹೈಸ್ಕೂಲು ದಿನಗಳಲ್ಲಿ ಕೆಲವೊಂದು ಫೋಬಿಯಾ 
ನನ್ನನ್ನು ಸಿಕ್ಕಾಪಟ್ಟೆ ಕಾಡಿದ್ದವು. ಮನೆಗೆ ಯಾರಾದರೂ ವಯಸ್ಸಾದ ಗೆಸ್ಟುಗಳು ಬಂದುಬಿಟ್ಟರೆ 
ಸಣ್ಣಗೆ ನಡುಕ ಶುರುವಾಗುತ್ತಿತ್ತು. ನಿಜ ಹೇಳಬೇಕೆಂದರೆ, ಆವಾಗೆಲ್ಲ ಎರಡರಿಂದ ಇಪ್ಪತ್ತರವರೆಗಿನ 
ಮಗ್ಗಿಯನ್ನು ಬಾಯಿಪಾಠ ಮಾಡುವದು ನಮಗೆಲ್ಲ mandatory ಆಗಿತ್ತಾದರೂ ಈ ಹದಿನೇಳರ ಮಗ್ಗಿ 
ಮಾತ್ರ ಯಾವಾಗಲೂ ನನಗೆ ಕೈಕೊಡುತ್ತಿತ್ತು. 

ಹಾಗಾಗಿ ಬಂದ ಅತಿಥಿಗಳು ಏನೇ ಕೆಲಸ ಹೇಳಲಿ, ನನ್ನ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಕೇಳಲಿ,
ಆದರೆ 'ಹದಿನೇಳರ ಮಗ್ಗಿ'ಯೊಂದನ್ನು ಮಾತ್ರ ಕೇಳದಿರಲಿ ದೇವರೇ ಅಂತ ಕಾಣದ ಭಗವಂತನಲ್ಲಿ
ಮೊರೆಯಿಡುತ್ತಿದ್ದೆ. ಆದರೆ ಬಹುತೇಕ ಸಲ ಭಗವಂತನಿಗೆ ನನ್ನ ಭಕ್ತಿ ರುಚಿಸುತ್ತಿರಲಿಲ್ಲ. 
ಗುರಿಯಿಟ್ಟು ನೇರವಾಗಿ ತೊಡೆಗೇ ಗದಾಪ್ರಹಾರ ಮಾಡಿದ ಭೀಮನಂತೆ, ಬಂದ ಅತಿಥಿಗಳ ಪೈಕಿ
ಅದರಲ್ಲೂ ವಯಸ್ಸಾದ ಅಜ್ಜಂದಿರು, 
"ಏನಪ ತಮ್ಮ, ಹದಿನೇಳ ಐದಲೇ ಎಷ್ಟು..?" ಅಂತ ಬಾಣ ಹಿಡಿದು ನನ್ನಂಥ ಪಿಳ್ಳೆಯ ಮೇಲೆ 
ಪ್ರಯೋಗಿಸಿಯೇ ಬಿಡುತ್ತಿದ್ದರು! ಆಗೆಲ್ಲ ನಾನು ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡ ಅಭಿಮನ್ಯುವಿನಂತೆ 
ಕಣ್ ಕಣ್ ಬಿಟ್ಟು ಧರಾಶಾಯಿಯಾಗುತ್ತಲಿದ್ದೆ.
ಇಷ್ಟಕ್ಕೂ ಪ್ರಶ್ನಿಸುವದು ಎಷ್ಟು ಸರಳ ಅಲ್ವ?

ಒಂದೆರಡು ವರ್ಷಗಳ ಹಿಂದೆ ಉತ್ತರ ಕರ್ನಾಟಕವೆಲ್ಲ ಅತೀವೃಷ್ಟಿಯಿಂದ ನೀರುಪಾಲಾದಾಗ ಅಲ್ಲಿನ 
ಎಂಥದ್ದೋ ಹಳ್ಳಿಯಲ್ಲಿ ಯುವಕನೊಬ್ಬ ಮೂರು ಹಗಲು, ಮೂರು ರಾತ್ರಿ ಹಸಿವೆ, ಭಯದಿಂದ 
ಕಂಗೆಟ್ಟು ಮರದ ಮೇಲೆ ಆಶ್ರಯ ಪಡೆದಿದ್ದ. ಆತನ ಬಂಧುಗಳು ನೀರು ಪಾಲಾಗಿ ಸತ್ತೇ ಹೋಗಿದ್ದರು.
ಹೆಲಿಕಾಪ್ಟರ್ ಸಹಾಯದಿಂದ ಮರದ ಮೇಲಿದ್ದ ಆತನನ್ನು ರಕ್ಷಿಸಲಾಯಿತು.  ಆದರೆ ಮೀಡಿಯಾಗೆ 
ಪ್ರಶ್ನಿಸುವ ಕಾತುರ. ಹೆಲಿಕಾಪ್ಟರ್ ನಲ್ಲಿಯೇ ಮೈಕು ಹಿಡಿದ ವರದಿಗಾರ ಆ ಯುವಕನನ್ನು ಪ್ರಶ್ನಿಸುತ್ತಿದ್ದ:
"ಈಗ ಏನನಿಸುತ್ತಿದೆ?ಹ್ಯಾಗನಿಸುತ್ತಿದೆ..?"    

ಅರೆರೇ,ಪ್ರಶ್ನಿಸುವದು ಎಷ್ಟು ಸರಳ ನೋಡಿ.ಉತ್ತರಿಸೋದೇ ಕಷ್ಟ ಕಷ್ಟ..

ಸರಿ, ಹಾಗಂತ ಕೆಲವೊಂದು ಪ್ರಶ್ನೆಗಳಿಗೆ ನನ್ನಲ್ಲಿ ಸಿದ್ಧ ಉತ್ತರಗಳಿದ್ದವು. ಪ್ರೈಮರಿಯಲ್ಲಿ ನಿಬಂಧ 
ಬರೆಯುವಾಗ ಕೆಲವು ಸಾಲುಗಳು ಎಲ್ಲ ಕಾಲಕ್ಕೂ, ಎಲ್ಲ ಪ್ರಶ್ನೆಗಳಿಗೂ apply ಆಗುತ್ತಿದ್ದವು. ಸಾಮ್ರಾಟ್ ಅಶೋಕನೂ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅಕ್ಬರನೂ ಪ್ರಜೆಗಳನ್ನು ಮಕ್ಕಳೆಂದೇ
ಭಾವಿಸಿದ್ದ. ರಾಣಿ ಚೆನ್ನಮ್ಮಳೂ ಕೂಡ. ಚಕ್ರವರ್ತಿ ಅಶೋಕ ರಸ್ತೆಯ ಎರಡೂ ಬದಿಯಲ್ಲಿ ಗಿಡಗಳನ್ನು 
ನಡೆಸಿದರೆ, ಮಿಕ್ಕ ರಾಜರುಗಳು ಮರ ನೆಟ್ಟರು! ಎಲ್ಲ ಆಡಳಿತಗಾರರ ಆರ್ಥಿಕ ಪರಿಸ್ಥಿತಿ ಸಕತ್ತಾಗಿಯೇ
ಇತ್ತು. ಹೀಗೆ ಶುರುವಾಗುತ್ತಿದ್ದ ನಿಬಂಧಗಳಲ್ಲಿ ಬದಲಾಗುತ್ತಿದ್ದ ಸಾಲುಗಳೆಂದರೆ, ಆಯಾ ರಾಜರುಗಳು 
ಹುಟ್ಟಿದ ವರ್ಷ ಮತ್ತು ಸತ್ತ ದಿನಾಂಕ ಮಾತ್ರ.

ಆದರೆ ಆವತ್ತಿಗೆ ನನ್ನ ತಲೆ ತಿನ್ನುತ್ತಿದ್ದ ವಿಷಯಗಳ ಪೈಕಿ ಒಂದು ಮುಖ್ಯ ಪ್ರಶ್ನೆ ಯಾವಾಗಲೂ 
ಕಾಡುತ್ತಿತ್ತು.  ಯಾವ ರಾಜನೂ ಪ್ರಜೆಗಳಿಗಾಗಿ  'ಸಂಡಾಸ ಮನೆ' ಕಟ್ಟಿಸಲಿಲ್ಲವೇ? ಬಹಿರ್ದಸೆಗಾಗಿ 
ನಾನು ಮತ್ತು ನನ್ನ ಗೆಳೆಯರು ಏನೆಲ್ಲ ಸರ್ಕಸ್ ಮಾಡಬೇಕಾಗಿ ಬರುತ್ತಿತ್ತು. ಟಾಯ್ಲೆಟ್ ರೂಮಿನ 
ಸೌಭಾಗ್ಯವಿಲ್ಲದ ನಮಗೆಲ್ಲ ಅದೊಂದು ಕ್ರಿಯೆ ಮಾತ್ರ ದೊಡ್ಡ ತಲೆನೋವಿನ ಕೆಲಸವಾಗಿತ್ತು. 
ಅದೇನೋ ಮಹಾ ಘನಂದಾರಿ ಕೆಲಸವೆಂಬಂತೆ ಅದಕ್ಕೆ 'ಲಂಡನ್ ಪ್ರವಾಸ' ಅಂತ ಹೆಸರಿಟ್ಟಿದ್ದೆವು.
ಹಾಗೆ ಲಂಡನ್ ಗೆ ಹೋದಾಗ ಬೇಗ ಕ್ರಿಯೆ ಮುಗಿಯಲಿ ಎಂಬಂತೆ 'ಆಜಾ, ಆಜಾ, ಅಬ್ ಕೈಸಾ 
ಶರಮಾನಾ..' ಅಂತ ತಿಣುಕಾಡಿ ಹಾಡುತ್ತಿದ್ದೆವು.

ಹೀಗಿರುವಾಗ, ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕನಿಗೆ ಪ್ರವಾಸ ಕುರಿತಂತೆ ವಿಶೇಷ ಸೌಲಭ್ಯವೊಂದು
ಸಿಕ್ಕಿತು. ವರ್ಷಕ್ಕೋ, ಎರಡು ವರ್ಷಕ್ಕೋ ಒಂದುಸಲ ಕುಟುಂಬದ ಜನರೆಲ್ಲ ಬ್ಯಾಂಕಿನ ಹಣದಲ್ಲಿ
ಪ್ರವಾಸ ಕೈಗೊಳ್ಳಬಹುದಿತ್ತು. ಸರಿ, ಬೇಲೂರು-ಹಳೇಬೀಡು-ಶ್ರವಣಬೆಳಗೋಳ ಅಂತೆಲ್ಲ 
ತಿರುಗಾಡಿದ್ದಾಯ್ತು. ಏಳನೇ ಕ್ಲಾಸಿನಲ್ಲಿದ್ದ ನಾನು ಶ್ರವಣಬೆಳಗೋಳದ ಲಾಡ್ಜ್ ಒಂದರಲ್ಲಿ ಟಾಯ್ಲೆಟ್ 
ರೂಮಿಗೆ ಕಾಲಿಟ್ಟಾಗ ಎದೆ ಧಸಕ್ಕೆಂದಿತ್ತು. ಏನಿದೆ ಅಲ್ಲಿ? 
ಮಿರಿಮಿರಿ ಮಿಂಚುತ್ತಿರುವ ಕಮೋಡ್!

ಆಗಾಗ ಸಂಬಂಧಿಕರ ಮನೆಗೆ ಹೋದಾಗ ಅವರಲ್ಲಿನ Indian toilet ನೋಡಿದ್ದೆನಾದರೂ, ಇದ್ಯಾವದಪ್ಪ?
ಇದರಲ್ಲಿ ಹ್ಯಾಗೆ ಕೂತ್ಕೊಬೇಕು ಅನ್ನೋದೇ ಗೊತ್ತಾಗ್ತಿಲ್ವಲ್ಲ? ಯಾರಿಗಾದರೂ ಕೇಳೋಣವೆಂದರೆ ಒಣ 
ಮರ್ಯಾದೆ ಪ್ರಶ್ನೆ. ಆದದ್ದಾಗಲಿ ಎಂದುಕೊಂಡು Indian toilet ಥರಾನೇ ಮೇಲಕ್ಕೆ ಹತ್ತಿ ಪವಡಿಸಿದೆ. 
ಅದ್ಯಾಕೋ ಏನೋ ಈ ಸಲ ಲಂಡನ್ ಪ್ಲೇನು ಹತ್ತಿದಾಗ 'ಆಜಾ,ಆಜಾ..' ಹಾಡು ಬರಲೇ ಇಲ್ಲ!

ಕೊಟ್ಟ ಕುದುರೆ ಏರದವ ಅದ್ಯಾವ ಸೀಮೆಯ ಧೀರ? ಎಲ್ಲೋ ಏನೋ ಎಡವಟ್ಟಾಗಿದೆ ಅಂತ 
ಗೊತ್ತಾಗುತ್ತಿತ್ತು. ಆದರೆ ಎಲ್ಲಿ, ಏನು ಅಂತ ತಿಳಿಯುತ್ತಿಲ್ಲ. ಥತ್, ಹಾಳಾಗಿ ಹೋಗಲಿ ಅಂದುಕೊಂಡು 
ಪ್ಲೇನಿನಿಂದ ಕೆಳಗಿಳಿಯೋಣ ಅಂದುಕೊಂಡರೆ- ಪ್ಲೇನೇ ಅಲ್ಲಾಡುತ್ತಿದೆ!

ತನ್ನ ಜೀವಮಾನವಿಡಿ ಅದೆಷ್ಟೋ ಪ್ರವಾಸಿಗರನ್ನು ಹತ್ತಿ ಇಳಿಸಿದ್ದ ಈ 'ಲಂಡನ್ ಫ್ಲೈಟು' ಮೊದಲೇ 
ನಿತ್ರಾಣಗೊಂಡoತಿತ್ತು. ಅದರಲ್ಲೂ ನಾನು ಹತ್ತಿ ಕುಳಿತ ಭಂಗಿಗೆ ಅದರ ಫೌಂಡೇಶನ್ ಅಲ್ಲಾಡಿದೆ. 
ಪರಿಣಾಮವಾಗಿ ಇಳಿಯಲೆಂದು ಬಲಗಾಲು ಎತ್ತಿದರೆ ಎಡಗಡೆ ವಾಲುತ್ತಿತ್ತು. ಎಡಗಾಲು ಎತ್ತಿದರೆ 
ಬಲಗಡೆ ವಾಲುತ್ತಿತ್ತು. ನನಗಂತೂ ಗಾಬರಿಯಲ್ಲಿ ಬಂದ ಕೆಲಸ ಮರೆತು ಯಾವಾಗ ಇಲ್ಲಿಂದ ಎದ್ದು 
ಹೋದೇನೋ ಅಂತ ಡವಡವ ಶುರುವಾಗಿತ್ತು. ಬರಬರುತ್ತ ನನ್ನ ಎಲ್ಲ ಪ್ರಯತ್ನಗಳೂ ವಿಫಲವಾಗಿ 
ಕೊನೆಗೆ ಒಂದೇಟಿಗೆ ಅಲ್ಲಿಂದ  ಜಿಗಿಯುವದರ ಮೂಲಕ ಲಂಡನ್ ಪ್ರವಾಸ ಮುಕ್ತಾಯಗೊಂಡಿತ್ತು.   

ಹಾಗಂತ ಎಲ್ಲ ಪ್ರವಾಸಗಳೂ ಇಷ್ಟೇ ಸುಲಲಿತವಾಗಿರಲಿಲ್ಲ. ಎಂಟನೇ ಕ್ಲಾಸಿಗೆ ಬಂದಾಗ ಅಕ್ಕನಿಗೆ 
'ಹೆಣ್ಣು ತೋರಿಸುವ' ವಿಚಾರ ಬಂತು. ವರನ ಕಡೆಯವರು ತಂದೆಗೆ ಮೊದಲೇ ಪರಿಚಯವಿದ್ದುದರಿಂದ 
ಅಕ್ಕನ ಜೊತೆ ಗಂಡಿನ ಮನೆಯಿದ್ದ ಬಳ್ಳಾರಿಗೆ ನಾನು ಹೋಗುವದೆಂದು ಮನೆಯಲ್ಲಿ 
ನಿರ್ಧಾರವಾಯಿತು. ಯಾವಾಗ ಈ ಸುದ್ದಿ ನನ್ನ ಕಿವಿಗೆ ಬಿತ್ತೋ- ತಗಳ್ರಪ, ಮೈಯಲ್ಲಿ ಚಳಿಜ್ವರ ಶುರು!

ಎಂಟನೇ ಕ್ಲಾಸಿಗೆ ಬಂದರೂ ರಾತ್ರಿ bed wetting ಮಾಡುವ ಪ್ರಾಣಿಗೆ ಚಳಿಜ್ವರವಲ್ಲದೇ ಇನ್ನೇನು ಆಗಲು 
ಸಾಧ್ಯ? ರಾತ್ರಿ ಹಾಸಿಗೆಯಲ್ಲಿ ಉಚ್ಚೆ ಮಾಡುವ ನನ್ನ ಈ  ರೂಟೀನ್ (?) ತಪ್ಪಿಸುವದಕ್ಕಾಗಿ ಮನೆಯಲ್ಲಿ ಮಧ್ಯರಾತ್ರಿಯಲ್ಲೊಮ್ಮೆ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಹೊರಗೆ ಕಳಿಸುತ್ತಿದ್ದರು. ಒಮ್ಮೊಮ್ಮೆ ಹಾಗೆ 
ಎಬ್ಬಿಸಿದವರ ಮೇಲೆ ಸಿಟ್ಟಾಗಿ ನಿದ್ದೆಗಣ್ಣಲ್ಲಿ ಹೊರಗೆ ಹೋಗದೇ ಅಡುಗೆ ಮನೆಯಲ್ಲಿನ ಪಾತ್ರೆಗಳನ್ನೇ 
ಲಕಲಕ ಹೊಳೆಯಿಸಿ ಮರುದಿನ ಮನೆಯವರಿಂದ ಸಮಾ ಬೈಸಿಕೊಂಡಿದ್ದೂ ಉಂಟು!
ವಿಷಯ ಹೀಗಿರುವಾಗ ಬಳ್ಳಾರಿಗೆ ಹೋಗುವದೆಂದರೆ ಸುಮ್ನೇನಾ?

ಏನೇನೋ ನಾಟಕ ಮಾಡಿದ್ದಾಯ್ತು. ಆದರೆ ಮನೆಮಂದಿಗೆ ನನ್ನ ಡ್ರಾಮಾಬಾಜಿ ಗೊತ್ತಿದ್ದ ವಿಷಯವೇ
ಆಗಿದ್ದರಿಂದ ನನ್ನೆಲ್ಲ ನಾಟಕದ ಮೇಕಪ್ಪು ಉದುರಿ ಹೋಗುತ್ತಿತ್ತು. ಕೊನೆಗೂ ಅಂತೂ ಇಂತೂ
ಬಳ್ಳಾರಿ ಬಂತು. ವರ ಅಕ್ಕನನ್ನು ಒಪ್ಪಿಕೊಂಡಿದ್ದೂ ಆಯ್ತು. ರಾತ್ರಿ ಊಟವೂ ಆಯ್ತು. ಸರಿ,
ಮಲಗೋದಕ್ಕೆ ನಮಗೆ ಮೇಲಿನ ರೂಮಿನಲ್ಲಿ ವ್ಯವಸ್ಥೆ ಮಾಡಿದ್ದರು.

ಅಕ್ಕ ಖುಷಿಯಿಂದ ಮಲಗಿದ್ದಳು. ಆದರೆ ನಾನು? ನನ್ನ ಚಿಂತೆ ನನಗೆ! ಪಕ್ಕದಲ್ಲಿದ್ದ ಗೋಡೆ, ತಲೆ 
ಮೇಲಿದ್ದ ಫ್ಯಾನು, ಗಡಿಯಾರದ ಟಕ್ ಟಕ್.. ಎಷ್ಟೂಂತ ನೋಡೋದು? ಎಷ್ಟೂಂತ ಕೇಳೋದು? 
ಯಾವಾಗ ಮಲಗಿದೆನೋ ಗೊತ್ತಿಲ್ಲ.

ಅದ್ಭುತ ಕನಸು. ಯಾವುದೋ ಹೊಸ ಲೋಕಕ್ಕೆ ಬಂದಿದ್ದೇನೆ. ಎಲ್ಲರೂ ನನ್ನ ಮಾರ್ಕ್ಸ್ ಕಾರ್ಡ್ 
ನೋಡಿ ಬೆನ್ನು ತಟ್ಟುತ್ತಿದ್ದಾರೆ. ಮನೆಯಲ್ಲಿ ಸಂಭ್ರಮ. ಮನೆಗೆ ಬಂದಿರುವ ಯಾವ ಅತಿಥಿಯೂ 
ನನಗೆ ಹದಿನೇಳರ ಮಗ್ಗಿ ಕೇಳುತ್ತಿಲ್ಲ. ನಾನು ಎದೆಯುಬ್ಬಿಸಿಕೊಂಡು ಟೆಬಿರಿನಿಂದ
ಕೂತುಕೊಂಡಿದ್ದೇನೆ. ಅಕ್ಕ ನಿಧಾನವಾಗಿ ನನ್ನ ಹೆಸರು ಹಿಡಿದು ಯಾವುದೋ ಕೆಲಸಕ್ಕೆಂದು
ಕರೆಯುತ್ತಿದ್ದಾಳೆ. ನಾನು ಬೇಕಂತಲೇ ಕೇಳಿಸಿಕೊಳ್ಳುತ್ತಿಲ್ಲ. ಎಲ್ಲ ಸುಂದರವಾಗಿ ಕಾಣುತ್ತಿದೆ.
ಮನೆಯಲ್ಲಿ ಓಡಾಡುತ್ತಿರುವ ಅತಿಥಿಗಳ ಧ್ವನಿ. ಅವರ ಓಡಾಟ. ಅಕ್ಕ ಬಿಡುತ್ತಿಲ್ಲ; ನಾನು
ಕೇಳಿಸಿಕೊಳ್ಳುತ್ತಿಲ್ಲ. ತಲೆಕೆಟ್ಟ ಆಕೆ ಸಿಟ್ಟಿನಿಂದ ನನ್ನ ಕೈ ಹಿಡಿದು ಅಲ್ಲಾಡಿಸಿ ಕರೆಯುತ್ತಿದ್ದಾಳೆ..

ಥತ್, ದಿಢೀರಂತ ಎಚ್ಚರಗೊಂಡೆ. ಅಕ್ಕ ನಿಜವಾಗಿಯೂ ಕೈ ಹಿಡಿದು ಪ್ರೀತಿಯಿಂದ ಎಬ್ಬಿಸುತ್ತಿದ್ದಾಳೆ. 
ಎದ್ದು ಕುಳಿತು ನೋಡಿದೆ: ಹಾಸಿಗೆಯಲ್ಲಿ ತೇವ ತೇವ!

ಶಿವ ಶಿವಾ.. ಹೆಣ್ಣು ತೋರಿಸಲು ಬಂದವರ ಮನೆಯಲ್ಲೂ ಇದು ನಡೆದು ಹೋಯಿತಾ? ನನಗೆ 
ಅಳುವುದೊಂದೇ ಬಾಕಿಯಿತ್ತು. ಹೇಗಾದರೂ ಮಾಡಿ ನನ್ನ ಮರ್ಯಾದೆ ಉಳಿಸುವೆಯಾ ಅಂತ
ಅಕ್ಕನೆಡೆಗೆ ನೀರು ತುಂಬಿದ ಕಣ್ಣುಗಳು ಬೇಡಿಕೊಳ್ಳುತ್ತಿದ್ದವು. ಅಕ್ಕನಿಗೆ ಸಿಟ್ಟಿರಲಿಲ್ಲ. ಬೇಜಾರಿರಲಿಲ್ಲ.
ನನ್ನ ತಲೆಗೂದಲಲ್ಲಿ ಬೆರಳಾಡಿಸಿ, ಇಲ್ಲೇ ಇರು ಅಂತ ಹೇಳಿ ಕೆಳಗಿಳಿದು ಹೋದಳು. ಕೆಲವೇ ಹೊತ್ತಿನಲ್ಲಿ
ಬಂದವಳ ಕೈಯಲ್ಲಿ ಕುಡಿಯುವ ನೀರಿನ ತಂಬಿಗೆಯಿತ್ತು. ಅದರಲ್ಲಿದ್ದ ಅರ್ಧ ನೀರನ್ನು ಹಾಸಿಗೆಯಲ್ಲಿ
ಚೆಲ್ಲಿದಂತೆ ಮಾಡಿ, ಕೆಳಗಿಳಿದು ಹೋದಳು..

ಸ್ವಲ್ಪ ಹೊತ್ತಿನಲ್ಲಿ ಕೆಳಗೆ ಹಾಲ್ ನಲ್ಲಿ ಅಕ್ಕ, ಅಲ್ಲಿದ್ದವರಿಗೆ ಏನೋ ಅನಾಹುತವಾದಂತೆ 
ಹೇಳುತ್ತಿದ್ದುದು ನಿಧಾನವಾಗಿ ಕೇಳಿಸುತ್ತಿತ್ತು:
"ನನ್ನ ತಮ್ಮನಿಗೆ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡೀಬೇಕು. ಹಾಗಾಗಿ ನೀರು ತಗೊಂಡು ಕೊಟ್ಟೆ. 
ನಿದ್ದೆಗಣ್ಣಲ್ಲಿ ಕುಡಿಯುವಾಗ ಕೈತಪ್ಪಿ ಹಾಸಿಗೆಯ ಮೇಲೆ ನೀರು ಬಿದ್ದೋಗಿದೆ. ಬೇಜಾರು ಮಾಡ್ಕೋಬೇಡ್ರಿ.."

ನನಗೆ ಹೋದ ಜೀವ ಬಂದಂತಿತ್ತು. ಕುಣಿದಾಡಿ ಹಾಡುವುದೊಂದೇ ಬಾಕಿಯಿತ್ತು. ವಾಪಸ್ಸು ಬಂದ 
ಅಕ್ಕನ ಮುಖದಲ್ಲಿನ ಮುಗುಳ್ನಗೆ 'ಹೆಂಗೆ?' ಅಂತ ಕೇಳಿದಂತಿತ್ತು...

                                                                                       ---


Monday, October 10, 2011

ರೂಪಕಗಳ ರೂಪ ಬದಲಾಗಬೇಕಿದೆ!



    Photo: Internet




ರೋಮಾಂಚನ ತರದ ಪ್ರಯಾಣವಿದು
ಸರಕಾರಿ ಬಸ್ಸಿಗೆ ವೇಗವಿಲ್ಲ
ಕಿಟಕಿಯಲ್ಲಿ ಗಾಳಿಯಿಲ್ಲ
ಪದಬಂಧದಲ್ಲೂ ಮನಸ್ಸಿಲ್ಲ.
ಸುಂದರಿ ಬಂದು 
ಪಕ್ಕದಲ್ಲಿ ಪವಡಿಸಿದ್ದೇ ತಡ;
ಬಸ್ಸಿಗೂ ಮನಸಿಗೂ ನಾಗಾಲೋಟ!

ವೇಗ ಹೆಚ್ಚಿದಂತೆ ಹಾದಿಬದಿಯ 
ಕರೆಂಟ್ ತಂತಿಗಳು
ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ:
ಒಂದಕ್ಕೊಂದು ತಬ್ಬಿಕೊಂಡಂತೆ
ಎರಡೂ ಒಂದಾಗಿ ಹೋದಂತೆ.
ವೇಗ ಕಳೆದುಕೊಂಡಾಗ 
ಮುಚ್ಚಿಟ್ಟ ಸತ್ಯವೊಂದು ತೋರಿದೆ;
ಮೂರನೇ ತಂತಿಯೊಂದು ಕಂಡಿದೆ!

ರೂಪರೇಖೆಗಳೇ ಬದಲಾಗುವ 
ಈ ಹೊತ್ತಿನಲ್ಲಿ ರೂಪಕಗಳ 
ರೂಪ ಬದಲಾಗಬೇಕಿದೆ
ರೂಹೂ ಬದಲಾಗಬೇಕಿದೆ.

ಯತಿಗಳು ಒತ್ತುವ ಬಿಸಿಮುದ್ರೆ
ಪೋಸ್ಟ್ ಆಫೀಸಿನ ಕರಿಮುದ್ರೆ
ಭರತನಾಟ್ಯದ ಬೆರಳಮುದ್ರೆ -
ತ್ರಿಭುಜದ ಈ ಮೂರು ಬಿಂದುಗಳಿಗೂ 
ಪೈಥಾಗೊರಸ್ ಪ್ರಮೇಯಕ್ಕೂ ಸಂಬಂಧವಿಲ್ಲ 
ಆದರೆ ಯಾವತ್ತೋ ಅವಳ 
ಹಣೆಗೆ ಒತ್ತಿದ ತುಸುಮುದ್ರೆ 
ಮಾತ್ರ ತ್ರಿಭುಜ ಸೀಳಿದ 
ರೇಖೆಯಾಗಿ ಮುನ್ನುಗ್ಗಿದೆ;
ಏಳೂ ಬಣ್ಣ ಒಟ್ಟಿಗೆ ಚಿಮ್ಮಿಸಿದೆ;
ಕಾಮನಬಿಲ್ಲಿನ ಇಂದ್ರಜಾಲ ತೋರಿಸಿದೆ!

ಸದ್ಯ,ಕವಿಯ ಮುಲಾಜಿಗೆ 
ಬೀಳುವ ರೂಪಕಗಳನ್ನು 
ಇನ್ನೂ ಯಾರೂ ಖರೀದಿಸಿಲ್ಲ.
ಆದರೂ ಒಮ್ಮೊಮ್ಮೆ ರೂಪಕಗಳು 
ಹೀಗೂ ಹುಟ್ಟಿ 
ಹಾಗೆ ಸತ್ತು ಹೋಗುತ್ತವೆ.
ಕೊನೆಗೆ
ರೂಪ ಅಳಿಯುತ್ತದೆ
ರೇಖೆ ಉಳಿಯುತ್ತದೆ..
***

Monday, September 19, 2011

ಸೋಮಾರಿ ಸಂಡೇ ಮೂರ್ತಗೊಂಡ ಬಗೆ..


    Photo: Internet


ನೀಲಿ ತುಂಬಿದ ಬಟ್ಟಲು.
ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ.
ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು 
ನಿಧಾನವಾಗಿ ತೆಗೆದಂತೆ ಪೋರನೊಬ್ಬ ತನ್ನ ಪಾಟಿ ಚೀಲದಿಂದ ಬಗೆಬಗೆಯ ಸಾಮಗ್ರಿಗಳನ್ನು
ಅತೀ ಎಚ್ಚರಿಕೆಯಿಂದ ತೆಗೆಯುತ್ತಿದ್ದಾನೆ.ಜಗದ ಊಹೆಗೆ ನಿಲುಕದ ಯಾವುದೋ ಮಹತ್ತರ 
ಕಾರ್ಯವನ್ನು ತಾನೊಬ್ಬನೇ ಸಾಧಿಸುವ ಹಮ್ಮಿನಲ್ಲಿ ಇರುವಂತೆ ತೋರುತ್ತಿದ್ದಾನೆ.
ಆದರೆ ಪೋರನ ಈ ಕಾರ್ಯಕ್ಕೆ ಮನೆಯಲ್ಲಿನ ಜನರ್ಯಾರೂ ಗಮನ ಕೊಟ್ಟಂತಿಲ್ಲ.

ಇಷ್ಟಕ್ಕೂ ಏನೇನು ತೆಗೆಯುತ್ತಿದ್ದಾನೆ ಆತ? ಮೊದಲಿಗೆ ಮಗ್ಗಿ ಪುಸ್ತಕ.ನಂತರ ಭಾಷಾಂತರ ಮಾಲೆ.
ನಿನ್ನೆ ಕೊಂಡ ಹೊಸ ನೋಟಬುಕ್ಕು.ಇದು ನೋಡಿ,ಕೆಲವೇ ದಿನಗಳ ಹಿಂದಷ್ಟೇ ಮೂರು ತೂತುಗಳನ್ನು 
ಮಾಡಿ ರಟ್ಟಿನ ಮೇಲೆ ಹೊಲಿಗೆ ಹಾಕಿಸಿಕೊಂಡು ಬೈಂಡಿಂಗ್ ಮಾಡಿಸಿಕೊಂಡಿರುವ ಸರಕಾರಿ
ಪಾಠಪುಸ್ತಕ..
ಅದೋ,ಈಗ ಬರುತ್ತಿದೆ,ಬ್ರಹ್ಮಾಂಡದ ಅದ್ಭುತಗಳನ್ನೆಲ್ಲ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಪೆಟ್ಟಿಗೆ!
ಏನೇನಿಲ್ಲ ಅದರಲ್ಲಿ?

ಕೆಂಪು,ಹಸಿರು,ನೀಲಿ ಮತ್ತು ಕಪ್ಪು ಬಣ್ಣದ ರೀಫಿಲ್ಲುಗಳು ಸೇರಿದಂಥ ಒಂದೇ ಪೆನ್ನು.ಅಕಸ್ಮಾತ್,
ಒಂದು ರೀಫಿಲ್ಲು ಮುಗಿದೇ ಹೋದರೆ ಹೊಸತನ್ನು ಹ್ಯಾಗೆ ಮತ್ತೇ ಅದರಲ್ಲಿ ಸೇರಿಸೋದು ಅಂತ 
ಪೋರನಿಗೂ ಗೊತ್ತಿಲ್ಲ.ಇದೇ ಭಯದಿಂದಾಗಿ ಆತ ಆ ಪೆನ್ನನ್ನೇ ಉಪಯೋಗಿಸುತ್ತಿಲ್ಲ.ಇದು ನೋಡಿ:
ಪ್ಲಾಜಾ ಪೆನ್ನು,ಹೀರೋ ಪೆನ್ನು,ಇಂಚುಪಟ್ಟಿ ,ತ್ರಿಜ್ಯ,ಕೋನಮಾಪಕ,ಒಂದೆರಡು ಸತ್ತು(?)ಹೋದ 
ನವಿಲುಗರಿ,ಒಣಗಿದ ಅಶ್ವತ್ಥವೃಕ್ಷದ ಎಲೆ,ಮೂಲೆ ತಿಕ್ಕಿಸಿಕೊಂಡು ಸವೆದುಹೋದ ರಬ್ಬರು,
ಹೆಚ್ ಬಿ ಪೆನ್ಸಿಲ್ಲು,ಪುಸ್ತಕದ ರಟ್ಟಿನ ಮೇಲೆ ಅಂಟಿಸಬಲ್ಲಂಥ ಖಾಲಿ ಲೇಬಲ್ಲುಗಳು,ಒಂದು ಬರೆಯಬಲ್ಲ 
ಸ್ಕೆಚ್ ಪೆನ್ನು;ಇನ್ನೊಂದು ಕೆಟ್ಟು ಹೋದ ಸ್ಕೆಚ್ ಪೆನ್ನು..
ಅದುವೇ ಕಂಪಾಸ್ ಬಾಕ್ಸ್!

ಅದರೊಳಗಿಂದ ಪ್ಲಾಜ ಪೆನ್ನನ್ನು ಹೊರ ತೆಗೆದಿದ್ದಾನೆ ಈ ಪೋರ.ಎಚ್ಚರಿಕೆಯಿಂದ ತುಟಿಯುಬ್ಬಿಸಿಕೊಂಡು
ಅದರ ಬಿಡಿಭಾಗಗಳನ್ನು ಬಿಚ್ಚುತ್ತಿದ್ದಾನೆ.ಬಿಚ್ಚುವಾಗ ಇಂಕು ಬಿದ್ದರೆ? ಯಾವುದಕ್ಕೂ ಇರಲಿ ಅಂತ 
ಚಾಕ್ ಪೀಸನ್ನು ಹತ್ತಿರವೇ ಇಟ್ಟುಕೊಂಡಿದ್ದಾನೆ.ಇಂಕುಪೆನ್ನಿನ ಮುಚ್ಚಳ,ನಿಬ್ಬು,ನಾಲಿಗೆ ಎಲ್ಲವೂ 
ವೇಷ ಕಳಚಿಟ್ಟ ಪಾತ್ರಧಾರಿಗಳಂತೆ ಅನಾಥರಾಗಿ ಬಟ್ಟಲಿನಲ್ಲಿ ಬಿದ್ದುಬಿಟ್ಟಿವೆ.
ಬಟ್ಟಲಿನ ತುಂಬ ಈಗ ನೀಲಿ ನೀಲಿ.ಕೆಂಪು ಬಣ್ಣದ ಮುಚ್ಚಳ,ಬಂಗಾರ ವರ್ಣದ ನಿಬ್ಬು,ಕಪ್ಪನೆಯ 
ನಾಲಿಗೆ- ಎಲ್ಲವೂ ನೀಲಿಯಲ್ಲಿ ನೀಲಿಮಗೊಂಡಿವೆ.

ಪೋರನಿಗೆ ದಿಢೀರಂತ ಏನೋ ನೆನಪಾಗಿ ಅಮ್ಮನ ಕಡೆ ಓಡಿದ್ದಾನೆ.ಕ್ಷಣಮಾತ್ರದಲ್ಲಿ ಅಲ್ಲಿಂದ 
ಸೂಜಿ ಮತ್ತು ಬ್ಲೇಡುಗಳನ್ನು ಹಿಡಿದು ಮತ್ತೇ ತಾನಿದ್ದ ಜಾಗಕ್ಕೆ ಬಂದು ಕುಳಿತಿದ್ದಾನೆ.
"ಹುಶಾರೂ..." ಅಂತ ಅಡುಗೆ ಮನೆಯಿಂದ ಕೂಗಿದ ಕೂಗು ಇವನಿಗೆ ಕೇಳಿಸಿಯೇ ಇಲ್ಲ!
ಬ್ಲೇಡು ನಿಧಾನವಾಗಿ ನಿಬ್ಬಿನ ಮಧ್ಯೆ ಸೀಳತೊಡಗಿದೆ.ಸೂಜಿ ನಾಲಿಗೆಯನ್ನು ಸ್ವಚ್ಚಗೊಳಿಸುತ್ತಿದೆ.
ಆಗಾಗ ಬ್ಲೇಡನ್ನು ನಿಬ್ಬಿನ ಮಧ್ಯೆ ಇಟ್ಟು ಪೆನ್ನನ್ನು ಮೇಲೆ ಕೆಳಗೆ ಝಾಡಿಸುತ್ತಿದ್ದಾನೆ.ಈಗ ಕೊಳೆಯೆಲ್ಲ
ನೆಲಕ್ಕೆ ಬಿದ್ದೇ ಬಿದ್ದಿರುತ್ತದೆಂಬ ನಂಬಿಕೆಯಲ್ಲಿರುವಂತಿದೆ.

ಅಷ್ಟರಲ್ಲಿ ಹೊರಗಿನಿಂದ ಇನ್ಯಾರೋ ಪೋರನ ಹೆಸರನ್ನಿಡಿದು ಕೂಗು ಹಾಕಿದ್ದಾರೆ.ಗೋಲಿಯಾಟಕ್ಕೆ
ಕರೆದಿದ್ದಾರೆ.ಪೋರ ಕುಳಿತಲ್ಲಿಂದಲೇ "ಇಲ್ಲ,ಇಲ್ಲ.." ಅಂತ ಮರುಕೂಗು ಹಾಕಿ ಉಫ್ ಉಫ್ ಅಂತ 
ನಾಲಿಗೆಯನ್ನು ಊದಿ ಸ್ವಚ್ಚಗೊಳಿಸಿದ್ದಾನೆ.ಇಂಕು ಈಗ ಸರಾಗವಾಗಿ ಹರಿದೀತೆ?ಅಂತ ಮತ್ತೇ ಮತ್ತೇ 
ತನ್ನಷ್ಟಕ್ಕೆ ತಾನೇ ಕೇಳಿಕೊಂಡಿದ್ದಾನೆ.ಅಂತೂ ಇಂತೂ ವೇಷ ಕಳಚಿಟ್ಟ ಪಾತ್ರಧಾರಿಗಳು ಸ್ನಾನ 
ಮುಗಿಸಿಯೇ ಬಿಟ್ಟಿದ್ದಾರೆ;ಲಕಲಕ ಹೊಳೆದಿದ್ದಾರೆ.

ಎಲ್ಲ ಮುಗಿದಾದ ಮೇಲೆ ಕೊನೆಯದಾಗಿ ಬ್ರಹ್ಮಾಸ್ತ್ರ ಬಂದಿದೆ.ಎಲ್ಲ ಜೋಡಿಸಿಟ್ಟ ಪೋರ,ಖಾಲಿ ಪೆನ್ನನ್ನು 
ಕನ್ನಡಿಯ ಮೇಲೆ ಸುಮ್ಮನೇ ಗೀಚತೊಡಗಿದ್ದಾನೆ. ಪೋರನ ಈ ಕಾರ್ಯಕ್ಕೆ ಕನ್ನಡಿಯೂ ನಕ್ಕಂತಿದೆ;
ಸಾಥ್ ಕೊಟ್ಟಂತಿದೆ.ಪರಿಣಾಮವಾಗಿ,ಕನ್ನಡಿ ಮತ್ತು ಪೋರನ ಪ್ರೀತಿಗೆ ನಿಬ್ಬೇ ಸೋತು ಹೋಗಿದೆ!
ಮೊದಲಿಗೆ "ಕೀರ್.." ಎಂದು ಗುಡುಗಿ ಚೀವ್.. ಅನ್ನುತ್ತ ಸೋಲೊಪ್ಪಿಕೊಂಡಿದೆ..
ಅತ್ತ,ನಿಬ್ಬು ಪಾಲಿಶ್ ಆದಂತೆ ಕಂಡು ಕೆಲಸ ಮುಗಿಸಿದ ಖುಷಿ ಪೋರನ ಕಣ್ಣಲ್ಲಿ ಪ್ರತಿಫಲಿಸಿದೆ.

ಇತ್ತ,ವಿಷ ಕುಡಿಯದೇ ಬಟ್ಟಲೊಂದು ನೀಲಿನೀಲಿಯಾಗಿದೆ..

***  

Wednesday, August 24, 2011

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ಅಂತರ್ಜಾಲ ಚಿತ್ರ 


ದೊಂದು ಕೋಣೆ.ದೇವರ ಕೋಣೆ.
ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ 
ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ 
ಮುಗಿದು ಹೋಗಿದೆ.ಸುಗಂಧರಾಜದ ಪುಷ್ಪಹಾರ ಬಾಡಿ ಬಾಡಿ ಕಂದು ಬಣ್ಣಕ್ಕೆ ತಿರುಗಿದೆ.
ಪರಶಿವನ ಮುಂದೆ ಕುಳಿತಿರುವ ಆಕೆ ಸುಮ್ಮನೇ ಒಮ್ಮೆ ತಲೆಯೆತ್ತಿ ಮೇಲಕ್ಕೆ ನೋಡುತ್ತಾಳೆ.  
ಸಟ್ಟಂತ ಕಣ್ಣೀರಿನ ಒಂದು ಹನಿ ಆಕೆಯ ಕೆನ್ನೆಗುಂಟ ಕೆಳಕ್ಕೆ ಧುಮಕುತ್ತದೆ.

ಅದು ಈ ಜಗತ್ತು ಕಂಡ ಆಕೆಯ ಮೊಟ್ಟಮೊದಲ ಕಣ್ಣೀರಿನ ಹನಿ! 

ಇಷ್ಟುದಿನ ಆಕೆ ಸುರಿಸುತ್ತಿದ್ದ ಕಣ್ಣೀರನ್ನೆಲ್ಲ ಆಕೆ ಕಟ್ಟಿಕೊಂಡಿದ್ದ ಕಪ್ಪು ಪಟ್ಟಿಯೇ ತಿಂದು ಹಾಕುತ್ತಿತ್ತು.
ಇವತ್ತು ಆ ಪಟ್ಟಿಯನ್ನು ತೆಗೆದುಹಾಕಿದ್ದಾಳೆ.ತಾನು ನಂಬಿದ ಪರಶಿವನ ಮುಂದೆ ಅಸಹಾಯಕಳಾಗಿ 
ಮಾತಿಗಿಳಿದಿದ್ದಾಳೆ.
ಆಕೆ ಗಾಂಧಾರಿ!

"ಹೇ ಪ್ರಭೂ..ನಾನೀಗ ಎಣ್ಣೆ ತೀರಿದ ನಂದಾದೀಪ.ನಿನ್ನ ಹಣೆಗೊಂದು ತಿಲಕವಿಡಬೇಕೆಂದರೂ ಕೂಡ 
ನನ್ನ ಕೈಯಲ್ಲಿರುವ ಕೊರಡಿನಲ್ಲಿ ಗಂಧವಿಲ್ಲ! ನನ್ನವರೆನಿಸಿಕೊಂಡಿದ್ದ ಎಲ್ಲರೂ ಸತ್ತು ಹೋಗಿದ್ದಾಗಿದೆ.
ನಿನ್ನೆ ಮುಗಿದ ಕುರು ಮಹಾಯುದ್ಧ ನನ್ನ ಸಮಸ್ತ ಸಂಕುಲವನ್ನೆಲ್ಲ ತಿಂದು ಕುಳಿತಿದೆ.ಇಳಿಗಾಲದ ಈ 
ವಯಸ್ಸಿನಲ್ಲಿ ಇಂಥದ್ದನ್ನೆಲ್ಲ ನಾನು ನೋಡಬೇಕಾಗಿ ಬಂತೆ?ಎಷ್ಟೊಂದು ಪೂಜಿಸಿದೆನಲ್ಲ ತಂದೆ!
ಎಷ್ಟು ಮಂತ್ರ?ಎಷ್ಟು ಜಪ?ಅದೆಷ್ಟು ಭಜನೆಗಳು...

ನೀನೇ ಹೇಳು,ಈ ಸೌಭಾಗ್ಯಕ್ಕಾಗಿಯೇ ನಾನು ಕಣ್ಣಿದ್ದೂ ಕುರುಡಿಯಾಗಬೇಕಾಯಿತೆ?
ಇರಲಿಬಿಡು ತಂದೆ,ನಿನಗೆ ಗೊತ್ತಿಲ್ಲದ್ದು ಏನಿದೆ?ಪುತ್ರಶೋಕಂ ನಿರಂತರಂ! ಪತೀವ್ರತೆಯ ಈ ಪಟ್ಟ
ನನ್ನ ತಾಯ್ತನವನ್ನೇ ಕೊಂದು ಹಾಕಿತು.ಎಂಥಾ ಪಾಪಿ ನಾನು.ಒಂದು ದಿನವೂ ಮಕ್ಕಳ 
ಬಾಲ್ಯದಾಟ ನೋಡಲಿಲ್ಲ.ದುರ್ಯೋಧನನ ಕೆನ್ನೆ ಹಿಂಡಲಿಲ್ಲ;ದುಶ್ಯಾಸನನ ಜೊಲ್ಲು ಒರೆಸಲಿಲ್ಲ.
ಇನ್ನು ದುರ್ಮುಖ,ದುರ್ಮದ,ದುರಾಧರರೆಲ್ಲ ತಾಯಿಯಿದ್ದೂ ತಬ್ಬಲಿಯಾಗಿಯೇ ಬೆಳೆದರು.
ಹೋಗಲಿ,ನನ್ನ ಕೊನೇ ಮಗಳು ದುಶ್ಯಲೆ?
ಪಾಪದ ಕೂಸದು.ಆಕೆಯ ಮದುವೆಯ ದಿನ ಅವಳ ಕಣ್ಣಿನ ಹೊಳಪನ್ನೂ ಕೂಡ ಈ ಪಾಪಿ ಕಣ್ಣುಗಳು 
ನೋಡಲಿಲ್ಲ.ಇವತ್ತು ಹೀಗೆ ನಿನ್ನ ಮುಂದೆ ಭೋರಿಡುತ್ತಿದ್ದೇನೆ...

ನಂಗೊತ್ತು ದೇವ,ಹೀಗೆ ನಿನ್ನ ಮುಂದೆ ಕುಳಿತು ಮಾತನಾಡುವದನ್ನು ಬಿಟ್ಟರೆ ನನಗೆ ಬೇರೆ ದಾರಿಯಿಲ್ಲ.
ಆದರೆ ನಿಜ ಹೇಳು:ನನ್ನ ಮಕ್ಕಳು ಅಷ್ಟೊಂದು ಕೆಟ್ಟವರಾ? ಕೃಷ್ಣನ ಪ್ರಕಾರ ದುರ್ಯೋಧನ,ದುಶ್ಯಾಸನರೆಲ್ಲ
ಕಾಮುಕರಂತೆ.ಅಧರ್ಮಿಗಳಂತೆ.ಹಾಗಿದ್ದರೆ ಮೊನ್ನೆಯ ಯುದ್ಧದಲ್ಲಿ ಪಾಂಡವರಿಗೆ ಹೋಲಿಸಿದರೆ ಅದರ   
ಎರಡುಪಟ್ಟು ಸೈನ್ಯ ನನ್ನ ಮಗನ ಪರವಾಗಿ ಯಾಕೆ ನಿಂತಿರುತ್ತಿತ್ತು? ಅಧರ್ಮಿಗಳಾಗಿದ್ದರೆ ಭೀಷ್ಮ,ದ್ರೋಣರೇಕೆ
ದುರ್ಯೋಧನನ ಪಕ್ಕ ನಿಂತಿದ್ದರು?

ನೀನು ಏನೇ ಹೇಳು ಭಗವಾನ್,ಆ ವಿದುರ ಪರಮದ್ರೋಹಿ.ತಿಂದ ಮನೆಯ ಗಳ ಹಿರಿಯುವ ಜಾತಿ ಅವನದು.
ಅವನ ನಾಲಿಗೆ ನಮ್ಮದೇ ಅಡುಗೆ ಮನೆಯಲ್ಲಿದ್ದರೂ ಕೂಡ ಆತನ ತಲೆ ಮಾತ್ರ ಯಾವತ್ತೂ ಪಾಂಡವರ 
ಪರವಾಗಿಯೇ  ಕೆಲಸ ಮಾಡುತ್ತಿತ್ತು.ಈ ಪಾಂಡವರೇನು  ಕಡಿಮೆಯೇ? ಹಿಂದೆ ಇದೇ ಪಾಂಡವರು ಅರಗಿನ 
ಅರಮನೆಯಿಂದ ಓಡಿ ಹೋಗುವಾಗ ಅಲ್ಲಿ ಸುಮ್ಮನೆ ಮಲಗಿದ್ದ ಅದ್ಯಾರೋ ಆರು ಜನ ಅಮಾಯಕರ
ಸಮೇತ ಅರಗಿನರಮನೆಯನ್ನು ಸುಟ್ಟು ಹಾಕಿದರಲ್ಲ? ಪಾಪ,ಅವರೇನು ದ್ರೋಹ ಬಗೆದಿದ್ದರು?
ಜೀವ ಕೊಡುವ ತಂದೆ ನೀನು! ಅಂಥಾದ್ದರಲ್ಲಿ ಆ ಅಮಾಯಕರ ಜೀವ ತೆಗೆಯುವ ಹಕ್ಕನ್ನು ಯಾರು ನೀಡಿದರು 
ಈ ಪಂಚರಿಗೆ?

ಇನ್ನು ಹಿರಿಯಜ್ಜ ಭೀಷ್ಮ. ಚಿಕ್ಕವನಿದ್ದಾಗ ಇದೇ ಅರ್ಜುನ ಈ  ಅಜ್ಜನ ಮೇಲೆ ಒಂದಾದ ಮೇಲೊಂದು ಉಚ್ಚೆ 
ಸುರಿಸುತ್ತಿದ್ದಾಗ ಒದ್ದೆ ಪಂಚೆಯಲ್ಲೇ ಈ ಅಜ್ಜ ಆತನಿಗೆ ಮುದ್ದು ಮಾಡುತ್ತಿದ್ದುದು ನನಗಿನ್ನೂ ನೆನಪಿದೆ.
ಅಂಥ  ಅರ್ಜುನ ಏನು ಮಾಡಿದ ನೋಡಿದೆಯಾ? ತುಂಡು ಭೂಮಿಯ ಆಸೆಗಾಗಿ ಸ್ವಂತ ತಾತನನ್ನೇ 
ಬಾಣಗಳ ಮೇಲೆ ಮಲಗಿಸಿಬಿಟ್ಟ! ಆತನ ದುರಾಸೆ ವಿದ್ಯೆ ಕಲಿಸಿದ ಗುರುವಿಗೇ ತಿರುಮಂತ್ರ ಹೇಳಿಸಿತು.
ಈಗ ಹೇಳು ತಂದೆ,ಅಧರ್ಮಿಗಳು ಕೌರವರಾ?ಪಾಂಡವರಾ?

ನಂಗೊತ್ತು,ಇದೆಲ್ಲ ಕೃಷ್ಣನದೇ ಕುತಂತ್ರ.ದೇವಮಾನವನಂತೆ ಈ ಕೃಷ್ಣ.ನನ್ನ ಪಾಲಿಗೆ ಆತ ಮಹಾನ್ ಭ್ರಷ್ಟ!
ಏನೇನೋ ಹೇಳಿ ನನ್ನ ಮಗನ ತಲೆ ಕೆಡಿಸಿ ಕಳಿಸಿಬಿಟ್ಟ.ಆವತ್ತು ದುರ್ಯೋಧನನಿಗೆ ಅದೆಷ್ಟು ಪ್ರೀತಿಯಿಂದ 
ಹೇಳಿದ್ದೆ: ಮಗನೇ,ಇವತ್ತು ನಿನ್ನನ್ನು ಹುಟ್ಟುಡುಗೆಯಲ್ಲಿ ನೋಡುವ ಆಸೆಯಾಗಿದೆ ಬಾ ಅಂತ..
ನಂಗೊತ್ತಿತ್ತು,ಇಷ್ಟುದಿನ ಒಂದೇಸಮ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದರಿಂದ ನನ್ನ ಅಕ್ಷಿಗೊಂದು ಅದ್ಭುತಶಕ್ತಿ 
ಬಂದುಬಿಟ್ಟಿತ್ತು.ಅದೊಂದು ವಜ್ರಶಕ್ತಿ.ಮೊಟ್ಟಮೊದಲ ಬಾರಿಗೆ ಕಣ್ಣಿನ ಪಟ್ಟಿ ತೆಗೆದಾಗ ಯಾವ ವಸ್ತುವಿನ 
ಮೇಲೆ ನಿನ್ನ ದೃಷ್ಟಿ ಬೀಳುವದೋ,ಆ ವಸ್ತು ವಜ್ರಕಾಯವಾಗಲಿ! ಹಾಗಂತ ನೀನೇ ವರ ಕೊಟ್ಟಿದ್ದೆಯಲ್ಲ ಸ್ವಾಮೀ..
ಅದಕ್ಕೆಂದೇ ನನ್ನ ಮಗನಿಗೆ ಬೆತ್ತಲೆಯಾಗಿ ನನ್ನೆದುರಿಗೆ ಬಾ ಎಂದಿದ್ದೆ..

ಅಂತೆಯೇ ಆವತ್ತು ನನ್ನ ಮಗ ಬಂದಿದ್ದ.ನನ್ನೆದುರಿಗೆ ನಿಂತಿದ್ದ.ನಾನು ಮಾತ್ರ ಮೊಟ್ಟಮೊದಲ ಬಾರಿಗೆ 
ಕಣ್ಣ ಪಟ್ಟಿ ತೆಗೆಯುತ್ತಲೇ ಹುಚ್ಚಳಂತೆ ಚೀರತೊಡಗಿದ್ದೆ: 
ಅಯ್ಯೋ ಮಗನೇ..ನೀನೊಬ್ಬ ಹಸೀ ದಡ್ಡ.ಹುಂಬ ತಲೆಯ ಒಡ್ಡ! 
ಹೌದು ತಂದೆ,ಆವತ್ತು ನನ್ನ ಮಗ ನನ್ನ ಕೋಣೆಗೆ ಬೆತ್ತಲೆಯಾಗಿಯೇ ಬರುತ್ತಿದ್ದನಂತೆ.ಆದರೆ ಅಷ್ಟೊತ್ತಿಗೆ 
ಕೃಷ್ಣ ಎದುರಾಗಿ ಯಥಾಪ್ರಕಾರ ಶಂಖ ಊದತೊಡಗಿದಂತೆ:
ಇದೇನು ದುರ್ಯೋಧನ?ಅಮ್ಮ ಹೇಳಿದಳು ಅಂತ ನೀನು ಈ ಅವತಾರದಲ್ಲಿ ಹೋಗುತ್ತಿರುವೆ? 
ನಿನ್ನಮ್ಮ ಮಹಾಮುಗ್ಧೆ.ನಿನ್ನನ್ನು ಒಮ್ಮೆಯೂ ನೋಡಿಲ್ಲವಾದ್ದರಿಂದ ನೀನಿನ್ನೂ ಚಿಕ್ಕಮಗುವೆಂದು ತಿಳಿದಿದ್ದಾಳೆ.
ನಿನಗಾದರೂ ಬುದ್ಧಿ ಬೇಡವಾ?ಯಕಶ್ಚಿತ್ ಕೌಪೀನವಾದರೂ ಧರಿಸಿಕೊಂಡು ಹೊಗಬಾರದೇ..? 
ಅಂತೆಲ್ಲ ದುರ್ಯೋಧನನ ತಲೆಕೆಡಿಸಿ ಕಳಿಸಿದನಂತೆ.

ಅದೇ ಗುಂಗಿನಲ್ಲಿ ಈ ಒಡ್ಡ ಲಂಡಚೊಣ್ಣ ಧರಿಸಿಕೊಂಡು ನನ್ನ ಮುಂದೆ ನಿಂತಿದ್ದ.ಪರಿಣಾಮವಾಗಿ ನನ್ನ 
ದೃಷ್ಟಿ ಬಿದ್ದ ಆತನ ಇಡೀ ದೇಹ ವಜ್ರಕಾಯವೇನೋ ಆಯಿತು.ಆದರೆ ತೊಡೆಯವರೆಗೂ ಧರಿಸಿದ್ದ ಆತನ 
ಲಂಗೋಟಿಯನ್ನು ಮಾತ್ರ ನನ್ನ ದೃಷ್ಟಿ ಬೇಧಿಸಲಾಗಲಿಲ್ಲ.ನಿನ್ನೆ ಆ ಕೃಷ್ಣ ಭೀಮನಿಗೆ ಸಂಜ್ಞೆ ಮಾಡಿ ಸರಿಯಾಗಿ 
ಅದೇ ಜಾಗಕ್ಕೆ ಹೊಡೆಸಿದನಂತೆ.ಭ್ರಷ್ಟ ಕೃಷ್ಣ! ಅವನ ಜಾತಿಯೇ ಹಾಗೆ.ಅವನಪ್ಪ ವಸುದೇವನಿಗೆ 
ಹದಿನಾಲ್ಕು ಹೆಂಡಂದಿರು.ಇವನಿಗೆ ಹದಿನಾರು ಸಾವಿರ! ನೀನೇ ಹೇಳು ದೊರೆಯೇ,ಕಾಮುಕ ದುರ್ಯೋಧನನಾ?
ಅಥವಾ ಕೃಷ್ಣನಾ?

ಇಲ್ಲ,ಇಲ್ಲ.ನನ್ನ ನೂರು ಮಕ್ಕಳನ್ನು ಕೊಂದವನು ಕೃಷ್ಣನೇ.
ಭಗವಾನ್,ನಿನ್ನ ಮೇಲಾಣೆ.ನನ್ನ ಪಾತೀವ್ರತದ ಮೇಲಾಣೆ.ಈ ಕೃಷ್ಣ ಹ್ಯಾಗೆ ಕುರುವಂಶದ ದಾಯಾದಿಗಳು 
ತಮ್ಮತಮ್ಮಲ್ಲೇ ಕಚ್ಚಾಡುವಂತೆ ಪ್ರೇರೇಪಿಸಿದನೋ,ಅದೇ ಥರ ಈ ಕೃಷ್ಣನ ಯಾದವೀ ವಂಶವೂ 
ಪರಸ್ಪರ ಗುದ್ದಾಡಿ ಸಾಯುವಂತಾಗಲಿ.ಆ ಕಳ್ಳ ಕೃಷ್ಣನನ್ನು ತೀರ ಸೂತಜಾತಿಯ ಮನುಷ್ಯನೊಬ್ಬ 
ಕೊಲ್ಲುವಂತಾಗಲಿ. ಶಿವನೇ,ನಾನು ದಿನನಿತ್ಯ ನಿನಗೆ ಅರ್ಪಿಸುತ್ತಿದ್ದ ಪೂಜೆಯಲ್ಲಿ ಒಂಚೂರಾದರೂ 
ಕೊಸರಿದ್ದರೆ ಈ ನನ್ನ ಶಾಪ ಸೊರಗಿ ಹೋಗಲಿ..!

ಹಾಗಂತ ಶಪಿಸತೊಡಗಿದ ಗಾಂಧಾರಿ ಹುಚ್ಚಳಂತೆ ಬಡಬಡಿಸತೊಡಗುತ್ತಾಳೆ:
"ಅಯ್ಯೋ ವಿಧಿಯೇ,ಎಂಥ ಪಾಪಿ ನಾನು? ಒಂದು ದಿನವೂ ನನ್ನ ಮಗ 
ದುರ್ಯೋಧನನ ಕೆನ್ನೆ ಹಿಂಡಲಿಲ್ಲ.ದುಶ್ಯಾಸನನ ಜೊಲ್ಲು..."

--- 

Thursday, July 7, 2011

ಮರಣಮಂಚದಲ್ಲಿ ಕಾಡಿವೆ ಮಿಂಚುನೇತ್ರಗಳು!






ಸುಯ್ಯಂತ ತೇಲಿ ಬರುತ್ತಿದೆ ತಂಗಾಳಿ.
ಸುತ್ತಲೂ ಕಗ್ಗತ್ತಲು.ದೂರದಲ್ಲೆಲ್ಲೋ ಚಂಚಲಲಕ್ಷ್ಮಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆಯಿಡುತ್ತಿರುವಂತೆ ಕೇಳಿಸುತ್ತಿದೆ.
ನಿಜವಾಗಿಯೂ ಅದು ಗೆಜ್ಜೆಯ ನಾದವಾ?ಅಥವಾ ಇನ್ಯಾವುದೋ ಹುಳದ ಸದ್ದಾ?ಅಥವಾ ನನ್ನದೇ ಭ್ರಮೆಯಾ? 
ಥತ್,ಇದೊಂದು ರೌದ್ರನರಕ! ಈ ಜಿರಳೆಗಳು ಮೈಯಲ್ಲಿರುವ ಮೂಳೆಗಳನ್ನೂ ಬಿಡುವುದಿಲ್ಲವೇನೋ.
ಬೆನ್ನಂಚಿನಲ್ಲಿ ಹರಿದಾಡುತ್ತಿರುವ ಹತ್ತಾರು ಜಿರಳೆಗಳನ್ನು ಓಡಿಸುವ ವ್ಯರ್ಥಪ್ರಯತ್ನ ಮಾಡುತ್ತಿದ್ದ ಆ ವಯೋವೃದ್ಧ 
ತನ್ನಷ್ಟಕ್ಕೆ ತಾನೇ ಗೊಣಗಿಗೊಂಡ:
ಕೃಷ್ಣ ಕೃಷ್ಣ..!

***
ಇಲ್ಲಿ ನೋಡಿರಿ:ವೀರವೃದ್ಧ ಮೆಲ್ಲಗೆ ಕದಲುತ್ತಿದ್ದಾನೆ. ಕಳೆದ ಐವತ್ತೆಂಟು ದಿನಗಳಿಂದ ಶರಮಂಚದ ಮೇಲೆ ಜೀವಶ್ಶವವಾಗಿ 
ಮಲಗಿರುವ ಆ ವೃದ್ಧನ ಕಣ್ಣಲ್ಲಿ ಅದ್ಯಾಕೋ ಇವತ್ತು ಬಿಟ್ಟೂ ಬಿಡದಂತೆ ನೀರಿಳಿಯುತ್ತಿದೆ.ಬದುಕೆಂಬ ಸಾಗರದಿಂದ 
ನೆನಪಿನಲೆ ಉಕ್ಕಿ ಬಂತಾ?ಗತಿಸಿಹೋದ ನೂರಿಪ್ಪತ್ತು ವರುಷಗಳ ಲಾಭ ನಷ್ಟದ ಲೆಕ್ಕ ಚುಕ್ತ ಆಯಿತಾ?
ಛೇ,ಏನೆಲ್ಲ ಗಳಿಸಿದೆ;ಎಷ್ಟೆಲ್ಲ ಕಳೆದುಕೊಂಡೆ!

ಜೀವನವಿಡೀ ನೂರಾರು ಅತಿರಥ ಮಹಾರಥರನ್ನು ಅಡ್ಡಡ್ಡ ಮಲಗಿಸಿದ ನನ್ನಂಥ ನನಗೇ ಇವತ್ತು  ಯಕಶ್ಚಿತ್ ಹತ್ತಾರು 
ಜಿರಳೆಗಳು ಬೆನ್ನಲ್ಲಿ ಹರಿದಾಡಿದ್ದಕ್ಕೆ ಕಣ್ಣೀರು ಬಂತೆ?ಅಥವಾ ತೊಡೆ ಸೀಳಿದ ಬಾಣದ ನೋವು ಹಣ್ಣಣ್ಣು ಮಾಡಿತೆ?
ಇಲ್ಲ.ಹಾಗಾಗಲು ಸಾಧ್ಯವೇ ಇಲ್ಲ.

ಈ ಸಾವು,ಈ ನೋವು,ಈ ರಕ್ತ,ಜಿರಳೆ ಬರೀ ನೆಪ.ಇವನ್ನೆಲ್ಲ ನಾನು ಇವತ್ತೇ ಮರೆಯಬಲ್ಲೆ.ಈ ಕ್ಷಣದಿಂದಲೇ ಮಿದುಳ 
ಪುಟದಿಂದ ಅಳಿಸಿ ಹಾಕಬಲ್ಲೆ.ಆದರೆ ನಿನ್ನೆ ಮೊನ್ನೆಯವರೆಗೂ ನನ್ನ ಅಂಗವಸ್ತ್ರದ ಮೇಲೆ ಇನ್ನಿಲ್ಲದ ಮುಗ್ಧತೆಯಿಂದ 
ಉಚ್ಚೆ ಹೊಯ್ಯುತ್ತಿದ್ದ ಪೋರ ದುರ್ಯೋಧನ ಅಷ್ಟೆಲ್ಲ ಜನರೆದುರಿಗೆ ನನ್ನನ್ನು ವಚನ ಭ್ರಷ್ಟನೆಂದು ಜರೆದನಲ್ಲ:
ಅದನ್ನು ಹ್ಯಾಗೆ ಮರೆಯಲಿ?
ಅವನಿಗೇನು ಗೊತ್ತು ಭೀಷ್ಮ ಶಪಥದ ಬಗ್ಗೆ?

ಕುರುಕುಲದ ಉದ್ಧಾರಕ್ಕೆ,ಅದರ ಸುರಕ್ಷತೆಗಾಗಿ ಏನೆಲ್ಲ ನೋಡಬೇಕಾಗಿ ಬಂತು.ಅಪ್ಪನ ಮದುವೆಗಾಗಿ ಹೊಟ್ಟೆಯೊಳಗಿನ 
ಕಾಮ ಬಸಿದಿಟ್ಟೆ.ರಜಸ್ವಲೆಯಾಗಿದ್ದ ಪಾಂಚಾಲಿಯ ವಸ್ತ್ರಾಪಹರಣ ನೋಡಿದೆ;ಕುರುಡನಂತೆ ವರ್ತಿಸಿದೆ.ಇನ್ಯಾರದೋ 
ವಂಶೋದ್ಧಾರಕ್ಕಾಗಿ ಧರ್ಮವನ್ನೇ ಅನೈತಿಕವಾಗಿ ಬಳಸಿದೆ.ಪಾಪದ ಪಾಂಡವರು:ಅವರ ವನವಾಸ,ಅಜ್ಞಾತವಾಸ,ಸಕಲ
ಅವಮಾನಗಳ ಮುಂದೆ ಅಮಾಯಕನಂತೆ ವರ್ತಿಸಿದೆ.
ತಪ್ಪು ತಪ್ಪು.ಘೋರ ತಪ್ಪು!

ಆದರೆ ನಾನು ತಾನೇ ಏನು ಮಾಡಬಲ್ಲವನಾಗಿದ್ದೆ?ಎಲ್ಲವನ್ನೂ ಮರೆತೇನು.ಯಾರೂ ನನ್ನನ್ನು ಹೆದರಿಸಲಾರರು.ಯಾವುದೂ 
ನನ್ನ ಬ್ರಹ್ಮಚರ್ಯದ ಶಪಥಕ್ಕೆ,ಕುರುಕುಲದ ಸುರಕ್ಷತೆಗೆ ಅಡ್ಡಿಯಾಗಲಾರದು.ಆದರೆ ಆ ಕಣ್ಣುಗಳು?
ಅವೆರಡು ಮಿಂಚುನೇತ್ರಗಳನ್ನು ಹ್ಯಾಗೆ ಮರೆಯಲಿ?ಬದುಕಿನ ಮೂರುಮುಕ್ಕಾಲು ಆಯುಸ್ಸನ್ನು ಹಗಲೂ ರಾತ್ರಿ ನನ್ನನ್ನು 
ಭಯಭೀತಗೊಳಿಸಿದ ಆಕೆಯನ್ನು ಮರೆಯೋದುಂಟಾ.ಆಕೆಯ ಕಣ್ಣುಗಳಲ್ಲಿದ್ದ ರೋಷ,ಅವಮಾನ,ಅಭದ್ರತೆಗಳನ್ನು ನನ್ನಂಥ 
ನೂರಾರು ಭೀಷ್ಮರು ಬಂದರೂ ನಿವಾರಿಸಲಾರರು.
ಕ್ಷಮಿಸು ಅಂಬೆ!

ತಮ್ಮಂದಿರರಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರಿಗಾಗಿ ಸ್ವತಃ ನಾನೇ ಹೊತ್ತುಕೊಂಡು ಬಂದ ಮೂವರು ಕನ್ಯೆಯರಲ್ಲಿ 
ಈ ಅಂಬೆಯೂ ಒಬ್ಬಳು.ಆದರೆ ನಾನು ಹಾಗೆ ಅಪಹರಿಸುವ ಮೊದಲೇ ಇನ್ನೊಬ್ಬನ್ಯಾವನನ್ನೋ ಪ್ರೀತಿಸಿದ್ದಳು.
ತುಸು ಅವಸರದ ಹುಡುಗಿ! ಅಂಥ ಅಂಬೆ ನನ್ನ ತಮ್ಮಂದಿರ ಮುಖ ಕೂಡ ನೋಡಲಿಲ್ಲ.ತನ್ನದೇ ಹಳೆಯ ಪ್ರೇಮಿಗಾಗಿ 
ರಚ್ಚೆ ಹಿಡಿದಳು.ಹುಚ್ಚಿಯಾದಳು.ಕೊನೆಕೊನೆಗೆ ಹೆದರಿ ಒದ್ದೆಯಾದ ಗುಬ್ಬಚಿಯೇ ಆಗಿ ಹೋದಳು.

ತೀರ ಕೊನೆಗೆ ಹಳೇ ಪ್ರೇಮಿಯ ಮಿಲನಕ್ಕೆಂದು ನಾನೇ ಅವಳನ್ನು ಕಳಿಸಿ ಕೊಡಬೇಕಾಯಿತು.ಆದರೇನು,ಆಕೆ ಕೆಲವೇ 
ದಿನಗಳಲ್ಲಿ ವಾಪಸು ಬಂದಿದ್ದಳು;ಪ್ರಿಯತಮನ ತಿರಸ್ಕಾರಕ್ಕೆ ಒಳಗಾಗಿ.ಹಾಗೆ ಬಂದವಳ ಕಣ್ಣುಗಳಲ್ಲಿ ನೀರಿರಲಿಲ್ಲ:
ರಕ್ತವಿತ್ತು!
ಅಲ್ಲೀಗ ರೋಷ ಮಡುಗಿತ್ತು.ಸೇಡು ಚಿಮ್ಮುತ್ತಿತ್ತು.ಭರಿಸಲಾಗದ ವೇದನೆ ಮತ್ತು ಬದುಕಿನ ಅಭದ್ರತೆ ಪ್ರತಿಫಲಿಸುತ್ತಿತ್ತು.
ಆವತ್ತೇ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಭಯಗೊಂಡಿದ್ದೆ.ನಾಚಿಕೆಯಿಂದ ತಲೆತಗ್ಗಿಸಿದ್ದೆ.ತೀರ ಕೊನೆಗೊಮ್ಮೆ 
ಆಕೆ,ನೀನೇ ನನ್ನ ಮದುವೆಯಾಗು ಅಂದಾಗ ನನ್ನ ಶಪಥ ನನಗೇ ಷಂಡನಾಗಿ ಕಾಡಿತ್ತು!
ಇವತ್ತು ಮತ್ತೇ ಮತ್ತೇ ಕಾಡುತ್ತಿದೆ.

ಯಾಕೆಂದರೆ ಮೊನ್ನೆ ತಾನೇ ನನ್ನೆದುರು ಯುದ್ಧಕ್ಕೆ ನಿಂತ ಶಿಖಂಡಿಯೆಂಬ ಯೋಧನಲ್ಲಿ ಅಂಬೆಯ ಕಣ್ಣುಗಳನ್ನು ಕಂಡೆ. 
ಅದೇ ರೋಷ.ಅದೇ ಸೇಡು.ನಂಗೊತ್ತಿದೆ,ಈ ಸಲ ಮಾತ್ರ ಈಕೆ ನನ್ನ ಪಾಲಿಗೆ ಯಮನಂತೆ ಕಾಡುತ್ತಾಳೆ.
ಆಕೆ ಅರ್ಜುನನ ಮುಂದೆ ನಿಂತಿರುವುದೇ ಅದಕ್ಕಾಗಿ!

ಇರಲಿ.ಬದುಕಿನುದ್ದಕ್ಕೂ ಲಕ್ಷಾಂತರ ಯೋಧರೊಂದಿಗೆ ಸೆಣಸಿದೆ.ಗೆದ್ದೆ.ಆದರೆ ಇವತ್ತು ನನ್ನೆಲ್ಲ ಭುಜಕೀರ್ತಿಗಳನ್ನು 
ಬದಿಗಿಟ್ಟು ಅತ್ಯಂತ ವಿನಮ್ರನಾಗಿ ನುಡಿಯುತ್ತಿದ್ದೇನೆ: ಅಂಥ ಅಂಬೆಯೆಂಬ ಹೆಂಗಸಿನ ಪರವಾಗಿ ವಾದಿಸಲು ಬಂದ 
ಸ್ವತಃ ಪರಶುರಾಮನಂಥ ಅಪ್ರತಿಮ ವಿಪ್ರೋತ್ತಮನನ್ನೇ ಸೋಲಿಸಿದ ನನಗೆ ಅಂಬೆಯಂಥ ಎಳಸು ಹುಡುಗಿಯ 
ಮುಂದೆ ತಲೆಬಗ್ಗಿಸಿ ಸೋಲೊಪ್ಪಿಕೊಳ್ಳುವದರಲ್ಲಿ ಯಾವ ನಾಚಿಕೆಯೂ ಇಲ್ಲ.
ಆಕೆಯ ಛಲ,ಸಿಟ್ಟು,ಧರ್ಮ,ಸೇಡುಗಳ ಮುಂದೆ ನಾನು ನೀರ್ವಿರ್ಯನಾಗುತ್ತಿದ್ದೇನೆ.
ಇದೆ ಸತ್ಯ.ಪರಮಸತ್ಯ.

ಆವತ್ತಿಗೂ,ಇವತ್ತಿಗೂ,ಯಾವತ್ತಿಗೂ...

***

Tuesday, June 14, 2011

ಬ್ರಿಗೇಡ್ ರೋಡಿನಲ್ಲಿ ಕಂಡವಳು


     ಇಂಟರ್ನೆಟ್ ಚಿತ್ರ 
    


ಡೆನಿಮ್ ಜೀನ್ಸು 
ಒರಟಾಗಿ ಕಟ್ಟಿದ ಕೂದಲು 
ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು 
ಮುಂಗೈಗೆ ಬಂತು ಹೇರ್ ಬ್ಯಾಂಡು 
ಎಲ್ಲಾ ಅದಲು ಬದಲು ಕಂಚಿಕದಲು. 
ಆದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ 
ಕಳೆದುಹೋಗುವ ಛಾನ್ಸೇ ಇಲ್ಲ. 
-
ಕಾಫಿಡೇನಲ್ಲಿ ವೀಕೆಂಡಿನ ಕಲರವ 
ಟೀಶರ್ಟ್ ಬರಹ ತಿವಿದು ಹೇಳುತ್ತಿದೆ: 
‘who cares?’
ಕಪ್ಪಿನಲ್ಲಿ ಹೃದಯ ಚಿತ್ತಾರದ ಬಿಂಬ 
ಸ್ವಾದ ಮಾತ್ರ ವಗರು ವಗರು 
ಈಗ ಬಂತು ಇದೋ ಬಂತು ಸಿಹಿ 
ಅನ್ನುವದರೊಳಗಾಗಿ ಕಾಫಿ ಮುಗಿದಿತ್ತು.
ಅಷ್ಟಾದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ 
ಕಳೆದುಹೋಗುವ ಛಾನ್ಸೇ ಇಲ್ಲ. 
-
ಎದೆಯನ್ನು ಸುತ್ತುವರೆದ 
ಎಲುಬಿನ ಹಂದರ 
ಮತ್ತು 
ತಾವರೆ ಎಲೆಯ ಮೇಲಣ ಬಿಂದು-
ಎರಡರದ್ದೂ ಒಂದೇ 
ಅಚಲ ನಿರ್ಧಾರ:
ಅಂಟು,ಅಂಟದಿರು.
ಇನ್ನಾದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ 
ಕಳೆದುಹೋಗುವ ಛಾನ್ಸೇ ಇಲ್ಲ. 
-
ದ್ರೌಪದಿಯಾಗುವ ತವಕವಿತ್ತು 
ಸ್ವಯಂವರದಲ್ಲಿ ಮಾತ್ರ 
ಶಬರಿಯಾಗೇ ಉಳಿದಳು 
ಇತ್ತ ಜಾನಕಿಯಾಗದೆ
ಅತ್ತ ಮೇನಕೆಯಾಗದೆ
ಬರೀ ಅಹಲ್ಯೆಯ ಕಲ್ಲಾದಳು. 
ಇಲ್ಲೀಗ ರಾಮನಿಲ್ಲ 
ಶಾಪಮುಕ್ತಿಯ ಸ್ಪರ್ಶವಿಲ್ಲ.    
ಇಷ್ಟಾದರೂ ಪ್ರತಿಸಂಜೆ 
ಆಕೆಯ ಕೋಣೆಯಿಂದ ತಂಬೂರಿ 
ಮೀಟಿದ ನಾದ ತೇಲಿಬರುತ್ತದೆ:
"ಚಿಂತೆಯಾತಕೋ ಬಯಲ ಭ್ರಾಂತಿಯಾತಕೋ.."
 -
ಎಷ್ಟಾದರೂ 
ಅಜ್ಜಿಯಿಂದ 
ಹರಿದು ಬಂದ 
ಜೀನ್ಸು-
ಹಾಗೆಲ್ಲ ಕಳೆದುಹೋಗುವ ಛಾನ್ಸೇ ಇಲ್ಲ!
--

Thursday, May 19, 2011

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ


                                          ಚಿತ್ರ: ಇಂಟರ್ನೆಟ್ 


ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ. ಆದರೆ ಏನೆಂದರೆ ಏನೂ ಬರೆದಿರಲಿಲ್ಲ.
ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು, ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ. ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ. ಗೌರವವಿದೆ. ಅದು ಹೇಗೆ ಅವರು ಇದ್ದಕ್ಕಿದ್ದಂತೆ ಕತೆ ಶುರು ಮಾಡಿ, ಎಲ್ಲೆಲ್ಲೋ ಪಾತ್ರಗಳನ್ನು ತಿರುಗಾಡಿಸಿ, ಎಲ್ಲಿಂದೆಲ್ಲಿಗೋ ಲಿಂಕ್ ಕೊಟ್ಟು ಇನ್ನೆಲ್ಲೋ ಶಾಕ್ ಕೊಟ್ಟು ಕೊನೆಗೆ ಅದು ಹ್ಯಾಗೋ circuit complete ಮಾಡೇ ಬಿಡುತ್ತಾರೆ! 
ನಾನು ಕತೆಗಾರನಲ್ಲ.

   ನಾನಾಗ ಐದನೇ ಕ್ಲಾಸು. ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ರ ವಿದ್ಯಾರ್ಥಿ. ಸದರಿ ಶಾಲೆಯ system ಸ್ವಲ್ಪ ವಿಚಿತ್ರ ಇತ್ತು. ನಾಲ್ಕನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗೆ ತರಗತಿಗಳಿದ್ದ ಈ ಶಾಲೆ ಬೆಳಿಗ್ಗೆ ಏಳರಿಂದ ಮಧ್ಯಾನ್ಹ ಹನ್ನೆರಡರವರೆಗೂ 'ಶಾಲೆ ನಂ.2' ಎಂದು ಕರೆಸಿಕೊಳ್ಳುತ್ತಿತ್ತು. ಮಧ್ಯಾನ್ಹ ಹನ್ನೆರಡರಿಂದ ಸಂಜೆ ಆರರವರೆಗೂ ಇದೇ ಸ್ಕೂಲು 'ಶಾಲೆ ನಂ.14' ಎಂದು ಗುರುತಿಸಲ್ಪಡುತ್ತಿತ್ತು. ಆಗ ಒಂದರಿಂದ  ಮೂರನೇ ತರಗತಿಗಳು ನಡೆಯುತ್ತಿದ್ದವು. 

   ಇಂಥ ಶಾಲೆ ನಂ.2 ರಲ್ಲಿ ನಾನಾಗ ಐದನೇ ಕ್ಲಾಸಿನಲ್ಲಿದ್ದೆ. ಖಡಕ್ ಮೇಷ್ಟ್ರು. ಗಾಂಧೀ ಟೋಪಿ ಮತ್ತು ಪಂಜೆ 
ಧರಿಸುತ್ತಿದ್ದ ಅವರು ನಮ್ಮಷ್ಟೇ ಎತ್ತರವಿದ್ದರೂ ಕೂಡ ನಮ್ಮಲ್ಲೊಂದು ವಿಚಿತ್ರ ಭಯ ಮೂಡಿಸಿದ್ದರು. ಆಗಷ್ಟೇ ನಮಗೆ ಇಂಗ್ಲೀಶ್ syllabus ಶುರುವಾಗಿತ್ತು. ಮನೆಯಲ್ಲಿ ಅಕ್ಕ ನನ್ನ ಒಂದನೇ ಕ್ಲಾಸಿನಿಂದಲೇ ಇಂಗ್ಲೀಶ್ 
ಪಾಠ ಶುರು ಮಾಡಿಬಿಟ್ಟಿದ್ದರಿಂದ ಐದನೇ ಕ್ಲಾಸಿನ ಇಂಗ್ಲೀಷಿನ ಬಗ್ಗೆ ನನಗೊಂಥರಾ ತಾತ್ಸಾರ ಬಂದಂತಿತ್ತು.  
ಆದರೆ ಪಾಪ, ಮೇಷ್ಟ್ರು ಅತ್ಯಂತ ಶ್ರದ್ಧೆಯಿಂದ ನಮಗೆಲ್ಲ ಇಂಗ್ಲೀಶ್ ಕಲಿಸುತ್ತಿದ್ದರು. ಬೆಳಿಗ್ಗೆ ಮೊದಲನೇ 
period ನಿಂದಲೇ "ದಿ ವಿಂಡೋ, ದಿ ಡೋರ್.." ಎಂದು ಆಂಗಿಕವಾಗಿ ತೋರಿಸುತ್ತಲೂ, ಜೊತೆಗೆ ನಿಜವಾದ ಕಿಟಕಿ, ಬಾಗಿಲುಗಳನ್ನು ದರುಶನ ಮಾಡಿಸುತ್ತಲೂ ಇಂಗ್ಲೀಷನ್ನು ಕಲಿಸುತ್ತಿದ್ದರು.

   ಇಲ್ಲೊಂದು ವಿಷಯ ಹೇಳಲೇಬೇಕು: ಮುಂದೆ ಹೈಸ್ಕೂಲ್, ಕಾಲೇಜಿಗೆ ಹೋದಂತೆಲ್ಲ ಪ್ರತಿಯೊಂದು ವಿಷಯಕ್ಕೂ ಬೇರೆ ಬೇರೆ ಮೇಷ್ಟ್ರು, ಬೇರೆ ಬೇರೆ periodಗಳು ಬದಲಾಗುತ್ತಿದ್ದುದನ್ನು ನೋಡಿದ ಬಳಿಕ ನಮ್ಮ ಹಳೆಯ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳ ಆಲ್ ರೌಂಡರ್ ಆಟ ನೋಡಿ ಬೆರಗಾಗಿದ್ದೂ ಉಂಟು. ಯಾಕೆಂದರೆ ನಮಗೆಲ್ಲ ಪ್ರೈಮರಿಯಲ್ಲಿ ಒಂದು ಕ್ಲಾಸಿಗೆ ಒಬ್ಬರೇ ಮೇಷ್ಟ್ರು. ಅವರೇ ಕನ್ನಡ ಕಲಿಸಬೇಕು. ಅವರೇ ಭೂಗೋಳ ಕಲಿಸಬೇಕು. ಅವರೇ ದಿ ವಿಂಡೋ, ದಿ ಡೋರ್ ಅನ್ನಬೇಕು. ಅವರೇ ವಿಜ್ಞಾನದ ಸೂತ್ರ ಕಲಿಸಬೇಕು ಮತ್ತು ಅವರೇ 
ಕೈಯಲ್ಲೊಂದು ಮರದ ಕೋನಮಾಪಕ ಹಿಡಿದು ಲಂಬಕೋನ-ವಿಶಾಲಕೋನ ಅಂತ ರೇಖಾಗಣಿತ ಕಲಿಸಬೇಕು. 
ಬಹುಶಃ ಇದೇ ಕಾರಣಕ್ಕೆ ಏನೋ,ಒಂದರಿಂದ ಏಳನೇ ಕ್ಲಾಸಿನವರೆಗೆ ನನಗೆ ಕಲಿಸಿದ ಎಲ್ಲ ಮೇಷ್ಟ್ರು, ಮಿಸ್ಸುಗಳ ಹೆಸರುಗಳನ್ನು ನಾನಿನ್ನೂ ಮರೆತಿಲ್ಲ. ಆದರೆ ಬಹುತೇಕ ಹೈಸ್ಕೂಲು-ಕಾಲೇಜುಗಳ ಮೇಷ್ಟ್ರುಗಳ ಹೆಸರು ನೆನಪಿಲ್ಲ.

   ಹೀಗಿದ್ದ ನಮ್ಮ ಪ್ರೈಮರಿ ಮೇಷ್ಟ್ರುಗಳ ತರಹೇವಾರಿ ಕೆಲಸದ ಮಧ್ಯೆ ಅವರಿಗೆ ಮತ್ತೊಂದು ಕೆಲಸವೂ ಇತ್ತು. 
ಆಗಾಗ ನಮಗೆಲ್ಲ ಅವರು ನೀತಿಪಾಠ ಹೇಳಿಕೊಡಬೇಕಿತ್ತು. ಸಾಲದೆಂಬಂತೆ ನಮ್ಮ ಇನ್ನಿತರ extra curriculum
activities ಬಗ್ಗೆ ಗಮನ ಕೊಡಬೇಕಾಗಿತ್ತು. ಅಂಥ activities ನ ಮುಂದುವರೆದ ಭಾಗವೆಂದರೆ  ಡೈರಿ! ಆಗ ನಾವೆಲ್ಲ ಒಂದು ಡೈರಿ maintainಮಾಡಬೇಕಾಗಿತ್ತು. ಅದರ ಹೆಸರು 'ದಿನಕ್ಕೊಂದು ಒಳ್ಳೆಯ ಕೆಲಸ' ಅಂತ. ಅದರಲ್ಲಿ ಪ್ರತಿದಿನ ನಾವೇನು ಒಳ್ಳೆಯ ಕೆಲಸ ಮಾಡಿದೆವು ಅಂತ ಬರೆದು ಮೇಷ್ಟ್ರಿಗೆ report ಮಾಡಬೇಕಾಗಿತ್ತು ಮತ್ತು ಪ್ರತಿದಿನ ಮೇಷ್ಟ್ರು ಅದನ್ನು ನೋಡಿ ಸಹಿ ಮಾಡಬೇಕಾಗುತ್ತಿತ್ತು.

   ಆದರೆ ಮೇಷ್ಟ್ರಿಗೆ ತಮ್ಮದೇ ಆದ ನಾನಾ ರೀತಿಯ ಕೆಲಸ, ಜಂಜಡಗಳಿದ್ದವಲ್ಲ? ಹೀಗಾಗಿ ಅವರು ನಮ್ಮಂಥ 
ಪಿಳ್ಳೆಗಳ ಒಳ್ಳೊಳ್ಳೆಯ (?) ಕೆಲಸಗಳನ್ನು ಓದುವ ಗೋಜಿಗೆ ಹೋಗದೆ ಕಣ್ಣುಮುಚ್ಚಿ ಸಹಿ ಗೀಚುತ್ತಿದ್ದರು. ಇದೆಲ್ಲದರ ಮಧ್ಯೆ ಡೈರಿ maintain ಮಾಡುವದು ನನಗೆ ಭಯಂಕರ ಕಿರಿಕಿರಿ ಅನಿಸುತ್ತಿತ್ತು. ಮಾಡಲಿಕ್ಕೆ ಯಾವುದೂ ಒಳ್ಳೆಯ ಕೆಲಸ ಸಿಗದೇ ಕಂಗಾಲಾಗುತ್ತಿದ್ದೆ. ಇಷ್ಟಕ್ಕೂ ಏನು ಬರೆಯಬೇಕೆಂದು ನಮಗೂ ಗೊತ್ತಿರಲಿಲ್ಲ. ಹೋಗಲಿ, ಯಾವದು ಒಳ್ಳೆಯ ಕೆಲಸ, ಯಾವುದು ಕೆಟ್ಟ ಕೆಲಸ ಎನ್ನುವದೂ ನಮಗೆ ಆಗ ಗೊತ್ತಿತ್ತೋ ಇಲ್ಲವೋ, ಒಟ್ಟಿನಲ್ಲಿ ನಾವು ಡೈರಿ ಬರೆಯುತ್ತಿದ್ದೆವು ಮತ್ತು ಅವರು ಸೈನು ಗೀಚುತ್ತಿದ್ದರು.

   ಒಂದು ದಿನ, ಮೇಷ್ಟ್ರು ಮೂಡು ಚೆನ್ನಾಗಿತ್ತೋ ಅಥವಾ ನನ್ನ ಗ್ರಹಚಾರ ಕೆಟ್ಟಿತ್ತೋ ಗೊತ್ತಿಲ್ಲ; ಆವತ್ತು ಮೇಷ್ಟ್ರಿಗೆ 
ನನ್ನ ಮೇಲೆ ಕೊಂಚ  ಜಾಸ್ತಿಯೇ ಪ್ರೀತಿ ಉಕ್ಕಿ ಹರಿಯಿತು. ಪರಿಣಾಮವಾಗಿ ನನ್ನ ಡೈರಿಯ ಪುಟಗಳನ್ನು 
random ಆಗಿ ಚೆಕ್ ಮಾಡುತ್ತಬಂದರು. ಆಮೇಲೆ ಕಣ್ಣು ಕಿರಿದು ಮಾಡಿಕೊಂಡು ಪ್ರತಿ ಪುಟವನ್ನೂ ಬಿಡದೇ
ಓದುತ್ತ ಬಂದರು. ತಿರುಗಿ ತಿರುಗಿ ಮತ್ತೇ ಮತ್ತೇ ನಸುನಗುತ್ತ ಓದಿದರೂ, ಓದಿದರೂ, ಓದಿದರೂ..
ನಂತರ ರಪರಪನೆ ಬೆನ್ನಿಗೆ ಬಾರಿಸತೊಡಗಿದರು..

"ಲೇ ಭಟ್ಟ! ನಿಮ್ಮ ಮನೇಲಿ ಊಟಕ್ಕೇನು ನೀವು ತಿನ್ನೋದಿಲ್ಲೇನು? ಬರೇ ಬಾಳೆಹಣ್ಣು ತಿಂದು 
ಚಹಾ ಕುಡೀತಿರೇನು..?" ಅನ್ನುತ್ತ ಮತ್ತೆರೆಡು ಬೆನ್ನಿಗೆ ಬಿಟ್ಟರು!

ಆಗಿದ್ದಿಷ್ಟೆ: ಮಾಡಲು ಯಾವದೇ ಒಳ್ಳೆಯ ಕೆಲಸ ಸಿಗದೇ ಕಳೆದ ನಾಲ್ಕೈದು ತಿಂಗಳಿನಿಂದ ಪ್ರತಿ alternate  
ದಿನಕ್ಕೊಮ್ಮೆ ಎರಡೇ ಕೆಲಸ ಮಾಡುತ್ತಿದ್ದೆನೆಂದು ಡೈರಿ ಹೇಳುತ್ತಿತ್ತು. ಅದೇನೆಂದರೆ:
1. ಇವತ್ತು ಮನೆಗೆ ಚಹಾಪುಡಿ ತಂದೆ.
2. ದಾರಿಯಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಕಸದ ತೊಟ್ಟಿಯಲ್ಲಿ ಹಾಕಿದೆ.

ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳಿಗೇ ಯಾಕೆ ಜಾಸ್ತಿ option ಗಳಿವೆ ಅಂತ ಇವತ್ತಿಗೂ ಗೊತ್ತಾಗಿಲ್ಲ.
                                                                    *
ವಾರ್ಷಿಕ ಪರೀಕ್ಷೆಯೆಂದರೆ ನನಗೆ ಯಾವಾಗಲೂ ಭಯ. ಸಾಮಾನ್ಯವಾಗಿ ಎಲ್ಲರೂ ಒಂದೇ ಸಲ ಪರೀಕ್ಷೆ ಬರೆದರೆ 
ನಾನು ಒಂದೇ question ಪೇಪರಿಗೆ ಎರೆಡೆರಡು ಸಲ ಬರೀಬೇಕಿತ್ತು. ಒಮ್ಮೆ ಶಾಲೆಯಲ್ಲಿ ಮತ್ತೊಮ್ಮೆ ಮನೆಯಲ್ಲಿ! 
ಪರೀಕ್ಷೆಯಲ್ಲಿನ ಉಳಿದ ವಿಷಯಗಳನ್ನು ಅಕ್ಕ ನೋಡಿಕೊಂಡರೆ ಗಣಿತ ವಿಷಯವನ್ನು ಮಾತ್ರ ತಂದೆ 
ನೋಡಿಕೊಳ್ಳುತ್ತಿದ್ದರು. ಅಕ್ಕನದೇನೋ ಕಿರಿಕಿರಿಯಿರಲಿಲ್ಲ. "ಪರೀಕ್ಷೆಯಲ್ಲಿ ಸರಿಯಾಗೇ ಬರ್ದಿದೀನಿ, ಇಲ್ಲಿ ಮಾತ್ರ ಏನೋ ಯಡವಟ್ಟು ಆಯಿತು.." ಅಂತ ಅಳುತ್ತ ಹೇಳಿದ ಕೂಡಲೇ ಅಕ್ಕ ಸುಮ್ಮನಾಗುತ್ತಿದ್ದಳು. 

   ಆದರೆ ತಂದೆಯ ಹತ್ತಿರ ಇದ್ಯಾವುದೂ ನಡೆಯುತ್ತಿರಲಿಲ್ಲ. ಯಾಕೆಂದರೆ ಅದು ಗಣಿತ. ಅಲ್ಲಿ end result ಮಾತ್ರ ಮುಖ್ಯ! ಇಷ್ಟಕ್ಕೆ ಅಷ್ಟಾದರೆ ಅಷ್ಟಕ್ಕೆ ಎಷ್ಟು? ಎಂಬ ಧಾಟಿಯ ಪ್ರಶ್ನೆಗಳಿಗೆ ನಾನು  academic formula ಗಳಿಗೆ ಜೋತುಬಿದ್ದು ಲೆಕ್ಕ ಬಿಡಿಸುತ್ತಿದ್ದರೆ, ಅವರು ತಮ್ಮದೇ ಆದ ಇನ್ಯಾವುದೋ street formula 
ಉಪಯೋಗಿಸಿ ವೇಗವಾಗಿ ಉತ್ತರ ತರುತ್ತಿದ್ದರು. ಕೊನೆಗೆ ನೋಡಿದರೆ ಇಬ್ಬರ ಉತ್ತರವೂ ಒಂದೇ ಆಗಿರುತ್ತಿತ್ತು. ನಾನು ಪರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ academic ಫಾರ್ಮುಲಾ ಉಪಯೋಗಿಸಬೇಕೋ ಅಥವಾ ತಂದೆಯ street ಫಾರ್ಮುಲಾ ಉಪಯೋಗಿಸಬೇಕೋ ಎಂದು ತಿಳಿಯದೆ ಗೊಂದಲಕ್ಕೀಡಾಗಿ ಕಣ್ ಕಣ್  ಬಿಡುತ್ತಿದ್ದೆ.

   ಹೀಗೆ ನನ್ನ ಒಂದನೇ ಕ್ಲಾಸಿನಿಂದ ಶುರುವಾದ ಈ ಪರೀಕ್ಷೆ ಎಂಬ ಗುಮ್ಮ ಅಕ್ಕ ಮದುವೆಯಾಗಿ ಅತ್ತೆ ಮನೆ 
ಸೇರುವವರೆಗೂ- ಅಂದರೆ ತೀರ ನನ್ನ ಒಂಭತ್ತನೇ ಕ್ಲಾಸಿನವರೆಗೂ ಕಾಡಿತು. ಆದರೆ ಅದೇಕೋ ಗೊತ್ತಿಲ್ಲ,
ಇವತ್ತಿಗೂ ನನಗೊಂದು ವಿಚಿತ್ರ ಕನಸು ಬೀಳುತ್ತದೆ: ನಾಳೆ ಕಾಲೇಜಿನಲ್ಲಿ digital electronics lab exam ಇದೆ ಅಂತ ಗೊತ್ತಿದ್ದರೂ ಹಿಂದಿನ ರಾತ್ರಿಯ ವರೆಗೂ ನಾನು lab journals ಬರೆದಿರುವದಿಲ್ಲ! ಇಂಥದೊಂದು ಕನಸು ಏನಿಲ್ಲವೆಂದರೂ ನೂರಾರು ಸಲ ಬಿದ್ದಿದೆ. ನಿದ್ರೆಯಲ್ಲೇ ಬೆವತಿದ್ದಿದೆ. ಇದೇ ಕಾರಣಕ್ಕೆ ತೀರ ಒಮ್ಮೊಮ್ಮೆ 
ತಲೆಕೆಡಿಸಿಕೊಂಡು psychiatrist ನನ್ನು ಭೇಟಿ ಮಾಡುವ ಹಂತಕ್ಕೂ ಹೋಗಿ ನಿರ್ಧಾರ ಬದಲಿಸಿದ್ದೇನೆ. 

   ಸರಿ, ಪರಿಸ್ಥಿತಿ ಹೀಗಿದ್ದ ಸಂದರ್ಭದಲ್ಲಿ ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ವಾರ್ಷಿಕ ಪರೀಕ್ಷೆ ಬಂತು. ತಗೊಳ್ರಪ,
dual duty ಶುರು! ಮೊದಲನೇ ಎರಡು ದಿವಸ ಶಾಲೆಯಲ್ಲೂ,ಮನೆಯಲ್ಲೂ exam ಎದುರಿಸಿದ್ದಾಯ್ತು. ಮೂರನೇ ದಿನ ಅದೇನು ತಲೆ ಕೆಟ್ಟಿತೋ ಏನೋ, ಶಾಲೆಯಲ್ಲಿ ಪೇಪರ್ ಬರೆದವನೇ ಸೀದಾ ಮನೆಗೆ ಬಂದು ಅಕ್ಕನ 
ಮುಖಕ್ಕೆ answer sheet ಬೀಸಾಕಿ ಭಂಡ ಧೈರ್ಯದಿಂದ ಹೇಳಿದೆ:
"ಅದೇನು ಚೆಕ್ ಮಾಡ್ಕೋತೀಯೋ ಮಾಡ್ಕ! ಇನ್ನೊಂದು ಸಲ ಮತ್ತೇ ಮನೇಲಿ answer ಬರಿಯೋದಿಲ್ಲ .."
ಅಕ್ಕನಿಗೆ ಒಂದೆಡೆ ಗಾಭರಿ.ಇನ್ನೊಂದೆಡೆ ನಗು. ಕ್ಲಾಸಿನಲ್ಲಿ  ಟೀಚರ್ ಗೆ ಕೊಡಬೇಕಾಗಿದ್ದ answer sheet ನೇರವಾಗಿ ಮನೆಗೇತಂದು ಅಕ್ಕನ ಮುಖಕ್ಕೆ ಹಿಡಿದಿದ್ದೆ..
                                                                   *
ಅದಾಗಿ, ಇವತ್ತು ಬೆಂಗಳೂರಿನಲ್ಲಿ ಪ್ರತಿದಿನ ಕ್ಲೈಂಟು, ಪ್ರತಿದಿನ ಕಾನ್ ಕಾಲ್ಸು, ಪ್ರತಿದಿನ ಶೇವಿಂಗು, ಅದೇ 
ಲ್ಯಾಪ್ ಟಾಪು, ಅದೇ ಆಪರೇಟಿಂಗ್ ಸಿಸ್ಟಮ್ಮು, ಅದೇ ಸರ್ವರ್ರು, ಅದೇ ಶೇರು, ಅವೆರಡರ  ಕ್ರ್ಯಾಶು, ಅವರು ಯಾಕೆ ಮಾತು ಬಿಟ್ಟರು, ಇವರು ಯಾಕೆ ಮರೆತು ಬಿಟ್ರು ಅಂತೆಲ್ಲ ತಲೆಚಿಟ್ಟು ಹಿಡಿದು ಕೊನೆಗೊಮ್ಮೆ ಮನಸು ಮಾಲಿಂಗ, ಮಿದುಳು ಶಂಭುಲಿಂಗ ಅಂತ ಪರಸ್ಪರ ಮುನಿಸಿಕೊಂಡು ಮೈಮನವೆಲ್ಲ ಜರ್ಜರಿತಗೊಂಡಾಗ-
ಹೃದಯ ಮಾತ್ರ ಮೆಲ್ಲಗೇ ಸಂತೈಸತೊಡಗುತ್ತದೆ: ಮುನಿಸೇಕೆ ಮಿತ್ರ? ಬಿಟ್ಟಾಕು ಎಲ್ಲ. ಅಲ್ಲಿದೆ ನೋಡು ಬಾಂಬೆ ಮಿಠಾಯಿ. ಕೆಂಪು ಬಣ್ಣದ ಈ ಬಾಂಬೆ ಮಿಠಾಯಿಗೆ ಶೇವಿಂಗೇ ಬೇಡ! ಬೇಕಾದರೆ ಮೀಸೆ ಹಚ್ಚಿಕೋ. ಮೀಸೆ 
ಬೇಸರವಾದರೆ ಅದನ್ನೇ ವಾಚು ಮಾಡಿಕೋ. ಇನ್ನೂ ಬೇಸರವಾದರೆ ಮಿಠಾಯಿಯನ್ನೇ ಚಪ್ಪರಿಸು. ತಲ್ಲಣಿಸದಿರು ಮಿತ್ರ,ಕೊಂಚ ಹಿಂತಿರುಗಿ ನೋಡು. ಇನ್ನೂ ಅಲ್ಲೇ ಇದೆ ನಮ್ಮೆಲ್ಲರ ಮಾಯಾಲಾಂದ್ರ; ಜೊತೆಗೆ ಅದರ ಬೆಳಕೂ!

ಹಾಗೆ ಕಂಡ ಬೆಳಕಿನಲ್ಲಿ ಮಿದುಳು ಮತ್ತೇ ಕಾಗದದ ದೋಣಿಯಾದಂತೆ, ಮನಸು ಮಳೆನೀರಾದಂತೆ...
                                                                 -